ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಆರ್‌ಜಿ ಕರ್ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ನೀಡಿರುವ ಜೀವಾವಧಿ ಶಿಕ್ಷೆ ಆದೇಶಕ್ಕೆ ಬೇಸರ ವ್ಯಕ್ತಪಡಿಸಿದೆ.
ಅಪರಾಧಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಕೋರಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಶೀಘ್ರವೇ ವಿಚಾರಣಾ ಪಟ್ಟಿಗೆ ಸೇರಿಸುವಂತೆ ಕೋರಿದ್ದಾರೆ.
ಸಿಬಿಐ ತನಿಖೆ ಮೇಲೆ ಸಿಎಂ ಅತೃಪ್ತಿ: ಇದಕ್ಕೂ ಮೊದಲು, ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ - ಕೊಲೆ ಪ್ರಕರಣದ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ ಬಲವಂತವಾಗಿ ಸಿಬಿಐಗೆ ನೀಡಲಾಯಿತು. ಇದರಿಂದಾಗಿ ದೋಷಿ ಮರಣದಂಡನೆಯಿಂದ ತಪ್ಪಿಸಿಕೊಂಡ. ರಾಜ್ಯ ಪೊಲೀಸರೇ ತನಿಖೆ ನಡೆಸಿದ್ದರೆ, ಆತನಿಗೆ ಕಠಿಣ ಶಿಕ್ಷೆ ಗ್ಯಾರಂಟಿ ಕೊಡಿಸುತ್ತಿದ್ದೆವು ಎಂದು ಹೇಳಿದ್ದಾರೆ.
ಮಾಲ್ಡಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಇಂಥದ್ದೇ ಮೂರು ಪ್ರಕರಣಗಳಲ್ಲಿ ಕೋಲ್ಕತ್ತಾ ಪೊಲೀಸರು 60 ದಿನಗಳಲ್ಲಿ ತನಿಖೆ ನಡೆಸಿ ದೋಷಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿಸಿದ್ದಾರೆ. ವೈದ್ಯೆಯ ಪ್ರಕರಣವನ್ನು ನಮ್ಮ ಪೊಲೀಸರೇ ನಡೆಸಿದ್ದರೆ, ಸಂಜಯ್ ರಾಯ್‌ಗೆ ಮರಣದಂಡನೆ ಖಚಿತವಾಗುತ್ತಿತ್ತು. ಕೇಂದ್ರದ ಸಿಬಿಐ ತನಿಖೆಗೆ ನೀಡಿದ್ದು, ಶಿಕ್ಷೆ ಪ್ರಮಾಣ ಕಡಿಮೆಯಾಯಿತು ಎಂದು ಅವರು ಬೇಸರಿಸಿದರು.
ಪರಿಹಾರಕ್ಕೆ ಕುಟುಂಬಸ್ಥರ ವಿರೋಧ: ಮೃತ ವೈದ್ಯೆಯ ಕುಟುಂಬಸ್ಥರಿಗೆ 17 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಆದರೆ, ಪರಿಹಾರವನ್ನು ಕುಟುಂಬಸ್ಥರು ನಿರಾಕರಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕು, ಪರಿಹಾರವಲ್ಲ. ಹಣಕ್ಕಾಗಿ ನಾವು ನ್ಯಾಯಾಲಯಕ್ಕೆ ಹೋಗಲಿಲ್ಲ. ಸಿಬಿಐ ಮತ್ತು ಕೋಲ್ಕತ್ತಾ ಪೊಲೀಸರ ತನಿಖೆಯು ಮಗಳ ಸಾವಿಗಿಂತ ಹೆಚ್ಚು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಬಿಐ ತನಿಖೆಯ ಆಧಾರದ ಮೇಲೆ ಕೋರ್ಟ್ ತೀರ್ಪು ನೀಡಿದೆ. ಕೋಲ್ಕತ್ತಾ ಪೊಲೀಸರ ತನಿಖೆಯ ಮೇಲಿನ ಅನುಮಾನದಿಂದಾಗಿ ನಾವು ಕೇಂದ್ರ ಸಂಸ್ಥೆಯ ತನಿಖೆಗೆ ಒತ್ತಾಯಿಸಿದ್ದೆವು. ಇದೀಗ ಆ ತನಿಖೆಯಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿ ಸಂಜಯ್ ರಾಯ್‌ಗೆ ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ. ಜೊತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದನ್ನು ಭರಿಸಲಾಗದಿದ್ದರೆ, ಹೆಚ್ಚುವರಿ 6 ತಿಂಗಳು ಕಾರಾಗೃಹ ವಾಸಕ್ಕೆ ಸೂಚಿಸಿದೆ.