ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಭಾಗವನ್ನು ಬೆಸೆಯುವ ಬಹು ನಿರೀಕ್ಷಿತ ‘ಸಿಗಂದೂರು ಸೇತುವೆ’ ಎಲ್ಲವೂ ಅಂದು ಕೊಂಡಂತೆ ಆದರೆ ಇದೇ ವರ್ಷದ ಏಪ್ರಿಲ್ ಅಥವಾ ಮೇನಲ್ಲಿ ಲೋಕಾರ್ಪಣೆಯಾಗಲಿದೆ. ಈ ಸೇತುವೆಯು ಶಿವಮೊಗ್ಗ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ಕೊಲ್ಲೂರು ಭಾಗಕ್ಕೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ, ಶರಾವತಿ ಹಿನ್ನೀರಿನ ದ್ವೀಪ ಪ್ರದೇಶದ ಜನರಿಗೆ ಸಾಗರ ಸೇರಿದಂತೆ ಶಿವಮೊಗ್ಗ ಭಾಗಕ್ಕೆ ಸಂಪರ್ಕಕ್ಕೆ ಅನುಕೂಲವಾಗಲಿದೆ.
ನಾಡಿಗೆ ವಿದ್ಯುತ್ ಪೂರೈಸಲು ಲಿಂಗನಮಕ್ಕಿ ಜಲಾಶಯ ಕಟ್ಟಿದ್ದರಿಂದ ನಡುಗಡ್ಡೆ ಸೃಷ್ಟಿಯಾಯಿತು. ಕಳೆದ 7 ದಶಕಗಳಿಂದ ಈ ಭಾಗದ ಜನ ದ್ವೀಪದಲ್ಲಿಯೇ ಬದುಕು ಸಾಗಿಸಿದ್ದಾರೆ. ಈ ಭಾಗದ ಜನ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂದು ಅನಿವಾರ್ಯವಾಗಿ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಮಕ್ಕಳನ್ನು ಹಾಸ್ಟೆಲ್ ಸೇರಿಸಿ ಓದಿಸಿದ್ದಾರೆ. ಈ ಸೇತುವೆ ನಿರ್ಮಾಣದಿಂದ ದ್ವೀಪದ ಜನತೆಗೆ ವೈದ್ಯಕೀಯ ಸೇವೆ, ಶಾಲಾ - ಕಾಲೇಜಿಗೆ ಹೋಗಲು ತುಂಬಾ ಅನುಕೂಲವಾಗುತ್ತದೆ. ಈಗ ಲಾಂಚ್ ಸೇವೆಯು ಬೆಳಗ್ಗೆಯಿಂದ ಸಂಜೆ ತನಕ ಮಾತ್ರ ಲಭ್ಯವಿದೆ. ತುರ್ತು ವೈದ್ಯಕೀಯ ಸೇವೆ ಬೇಕು ಅಂದಾಗ ದ್ವೀಪದಿಂದ ಸುಮಾರು 60 ಕಿ.ಮಿ ದೂರು ಇರುವ ತಾಳಗುಪ್ಪದಿಂದ ಸಾಗರಕ್ಕೆ ಬರಬೇಕಾಗುತ್ತದೆ. ಸೇತುವೆ ನಿರ್ಮಾಣವಾದರೆ ಭಾಗದ ಜನರ ಸಮಸ್ಯೆಗಳಿಗೆ ಪೂರ್ಣವಿರಾಮ ಇಟ್ಟಂತಾಗುತ್ತದೆ.
2010ರಲ್ಲಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿತ್ತು. ಅಲ್ಲದೇ ಇದು ಜಿಲ್ಲಾ ಮುಖ್ಯ ರಸ್ತೆ ಆಗಿತ್ತು, ಜೊತೆಗೆ ವನ್ಯಜೀವಿ ಅರಣ್ಯ ಪ್ರದೇಶವಾಗಿದ್ದ ಕಾರಣ ಸೇತುವೆ ನಿರ್ಮಾಣಕ್ಕೆ ಸಾಧ್ಯವಾಗಿರಲಿಲ್ಲ. ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ, ಕೇಂದ್ರದ ವನ್ಯಜೀವಿ ಮಂಡಳಿಯಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ ನಿರ್ಮಾಣ ಕಾಮಗಾರಿ ಶುರು ಮಾಡಲಾಯಿತು.
ಸೇತುವೆ ವಿಶೇಷತೆಗಳೇನು:
ಸಿಗಂದೂರು ಸೇತುವೆಯ ಉಸ್ತುವಾರಿ ಅಧಿಕಾರಿ ಪೀರ್ ಪಾಷಾ ಮಾತನಾಡಿ, "ಸಿಗಂದೂರು ಸೇತುವೆ ನಿರ್ಮಾಣಕ್ಕೆ 2019ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸೇತುವೆಯ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ" ಎಂದು ಹೇಳಿದರು.
"ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಸೇತುವೆ ನಿರ್ಮಾಣವನ್ನು ಸುಮಾರು 500 ಅಡಿ ಅಳದಿಂದ ಪ್ರಾರಂಭ ಮಾಡಬೇಕಿತ್ತು. ಶರಾವತಿ ಹಿನ್ನೀರಿನ ಜನತೆಗೆ ಓಡಾಡಲು ಅನುಕೂಲ ಮಾಡಿಕೊಡಲು ಮತ್ತು ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಅಂದಿನ ಸಿಎಂ ಯಡಿಯೂರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರ ಆಸೆಯಂತೆ, 2019 ರಲ್ಲಿ ಸೇತುವೆ ಕಾಮಗಾರಿ ಪ್ರಾರಂಭಿಸಲಾಯಿತು. ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯು 423.15 ಕೋಟಿ ರೂ ಟೆಂಡರ್ ಕಾಮಗಾರಿ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
"ಕೋವಿಡ್ನಿಂದ ಮತ್ತು ಫೈಲ್ ಕ್ಯಾಪ್ ಅಳಡಿಸಲು ಹಾಗೂ ಸಾಮಗ್ರಿ ಸಾಗಿಸಲು ನೀರಿನ ಪ್ರಮಾಣ ಹೆಚ್ಚಳ ಹಾಗೂ ಕಡಿಮೆ ಆಗುತ್ತಿದ್ದ ಕಾರಣಕ್ಕೆ ಕಾಮಗಾರಿಯು ತಡವಾಗಿ ಮುಕ್ತಾಯವಾಗುತ್ತಿದೆ. ಸೇತುವೆ ನಿರ್ಮಾಣಕ್ಕೆ 604 ಸೆಗ್ಮೆಂಟ್ ಎರೆಕ್ಷನ್ ಮಾಡಬೇಕಿತ್ತು. ಸೆಗ್ಮೆಂಟ್ ಬಾಕ್ಸ್ ಕಾರಿಡಾರ್ ಅಂತಾರೆ. ಈ ಸೇತುವೆಗೆ, ಎಕ್ಸ್ಟ್ರಾಡೋಸ್ಡ್ ಕೇಬಲ್ ಕಂ ಸಿಗ್ಮೆಟ್ ಬಾಕ್ಸ್ ಕಾರಿಡಾರ್ ಕಂ ಬ್ರಿಡ್ಜ್ ಅಂತ ಕರೆಯಲಾಗುತ್ತದೆ. 604ರಲ್ಲಿ 540 ಜೋಡಿಸಲಾಗಿದೆ. 60 ಸಗ್ಮೆಂಟ್ ಜೋಡಿಸಬೇಕಿದೆ. ಸಗ್ಮೆಂಟ್ ಫೆಬ್ರವರಿಯಲ್ಲಿ ಮುಕ್ತಾಯವಾಗಲಿದೆ. ನಂತರ ಕೇಬಲ್ ಅಳವಡಿಕೆ ಹಾಗೂ ರಸ್ತೆಗೆ ಡಾಂಬರೀಕರಣ ಮಾಡುವ ಕಾಮಗಾರಿ ಹಾಗೂ ಸುರಕ್ಷತೆ ಕೆಲಸ ಮಾಡಲು ಒಂದೂವರೆ ತಿಂಗಳು ಬೇಕಾಗುತ್ತದೆ. ಇದೇ ವೇಗದಲ್ಲಿ ಕಾಮಗಾರಿ ಪೂರ್ಣಗೊಂಡರೆ, ಏಪ್ರಿಲ್ನಲ್ಲಿ ಉದ್ಘಾಟನೆ ಆಗಬಹುದಾಗಿದೆ. ಇದು ದೇಶದ ಏಳನೇ ಕೇಬಲ್ ಸೇತುವೆ ಆಗಲಿದೆ" ಎಂದು ಮಾಹಿತಿ ನೀಡಿದರು.
ಸೇತುವೆ ತುಂಬಾ ಅವಶ್ಯಕ: ತುಮರಿ ನಿವಾಸಿಯಾದ ಮಧು ಕುಮಾರ್ ಮಾತನಾಡಿ, "ಸ್ಥಳೀಯರಿಗೆ ಸೇತುವೆ ತುಂಬಾ ಅನುಕೂಲವಾಗುತ್ತದೆ. ಈಗ ತುರ್ತು ಪರಿಸ್ಥಿತಿಯಲ್ಲಿ ಲಾಂಚ್ ಬೇಕೆಂದರೆ ಸಿಗಲ್ಲ, ಕಾರಣ ಲಾಂಚ್ ಎರಡು ಇದ್ದರೂ ಸಹ ಒಂದು ಲಾಂಚ್ ಒಂದು ಕಡೆಯಿಂದ ಮತ್ತೊಂದು ಇನ್ನೂಂದು ಕಡೆ ಹೋಗಲು ಕನಿಷ್ಠ 30 ನಿಮಿಷ ಬೇಕು. ಅಲ್ಲದೇ ಲಾಂಚ್ ವಾಪಸ್ ಬರಲು ಸಹ ಸಮಯ ಬೇಕಾಗುತ್ತದೆ. ತುರ್ತಾಗಿ ಹೋಗಲು ಇಲ್ಲಿ ಆಗಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳು ಬೆಳಗಿನ ಲಾಂಚ್ ಮಿಸ್ ಮಾಡಿಕೊಂಡರೆ, ಅವರಿಗೆ ಸಾಗರಕ್ಕೆ ಹೋಗಲು ಕನಿಷ್ಠ ಒಂದು ಗಂಟೆ ತಡವಾಗುತ್ತದೆ. ಇದರಿಂದ ಈ ಸೇತುವೆ ಈ ಭಾಗದ ಜನರಿಗೆ ಅವಶ್ಯಕವಾಗಿದೆ" ಎಂದರು.
ಸೇತುವೆಯಿಂದ ಸಮಯದ ಉಳಿತಾಯವಾಗುತ್ತದೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಾರುತಿ ಸೇತುವೆ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, "ಈಗ ಲಾಂಚ್ ವ್ಯವಸ್ಥೆ ಇದೆ. ಆದರೆ ಲಾಂಚ್ಗೆ ಕಾಯಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತದೆ. ಅದೇ ಬ್ರಿಡ್ಜ್ ಆದರೆ ಯಾವ ಸಮಯದಲ್ಲಿ ಬೇಕಾದರೂ ಸಹ ಬಂದು ಹೋಗಬಹುದು. ಇದರಿಂದ ನಮ್ಮ ಸಮಯ ಉಳಿದಂತಾಗುತ್ತದೆ" ಎಂದು ಹೇಳಿದರು.
ಸೇತುವೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು: ಕೊಳೂರು ಗ್ರಾಮ ಪಂಚಾಯಿತಿಯ ಜಯಂತ್ ಮಾತನಾಡಿ, "ಸೇತುವೆಯಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಲಾಡ್ಜ್, ಹೋಂ ಸ್ಟೇ, ಬೀದಿ ಬದಿ ಅಂಗಡಿ ಮಾಡಿಕೊಂಡವರಿಗೆ ಹಾಗೂ ಟ್ಯಾಕ್ಸಿ ನಡೆಸುವವರಿಗೆ ಇದರಿಂದ ತುಂಬಾ ಸಮಸ್ಯೆಯಾಗಲಿದೆ. ಈಗ ಸಂಜೆ ಆಯ್ತು ಅಂದ್ರೆ ಲಾಂಚ್ ಇಲ್ಲ ಅಂತ ಈ ಭಾಗದ ಯುವಕರು ರಾತ್ರಿ ಆಗುತ್ತಲೇ ತಮ್ಮ ತಮ್ಮ ಗ್ರಾಮವನ್ನು ಸೇರಿಕೊಳ್ಳುತ್ತಿದ್ದಾರೆ. ಆದರೆ ಸೇತುವೆಯಾದರೆ ಯುವಕರು ದಾರಿ ತಪ್ಪುವ ಸಾಧ್ಯತೆಗಳಿವೆ" ಎಂದು ಕಳವಳ ವ್ಯಕ್ತಪಡಿಸಿದರು.
"1950ರಲ್ಲಿ ತಾಳಗುಪ್ಪದಲ್ಲಿ ಸೇತುವೆ ಸಂಬಂಧ ನಡೆದ ಸಭೆಯಲ್ಲಿ ಈ ಭಾಗದ ಹಿರಿಯರು ಸೇತುವೆ ಆದರೆ ಕಳ್ಳರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿ ಸೇತುವೆ ಬೇಡ ಎಂದು ಬರೆದುಕೊಟ್ಟಿದ್ದರಂತೆ. ಆದರೆ, ಈಗ ಸೇತುವೆ ಆಗುತ್ತಿದೆ. ಸೇತುವೆ ಆದರೆ ಅರ್ಧ ನೋವಿದೆ. ಅರ್ಧ ಖುಷಿ ಇದೆ. ಲಾಂಚ್ ಪ್ರವಾಸಿಗರಿಗೆ ಆಕರ್ಷಣೆ ಆಗಿತ್ತು. ಆದರೆ, ಸೇತುವೆ ನಿರ್ಮಾಣವಾದ ನಂತರ ಅದನ್ನು ತೆಗೆಯುತ್ತಾರೆ ಎಂಬ ನೋವಿದೆ. ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗಾಗಿ ಒಂದು ಲಾಂಚ್ ಇರಲಿ ಎಂದು ನಾವು ಪತ್ರ ಬರೆದಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ದೇವಾಲಯ, ಬಸದಿಗಳ ಸರ್ಕ್ಯೂಟ್ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ