ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ಗೆ ಕಳೆದ ಗುರುವಾರ ಮುಂಜಾನೆ ಚಾಕುವಿನಿಂದ ಭೀಕರವಾಗಿ ಇರಿಯಲಾಗಿತ್ತು. ಆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಅವರ ಬೆನ್ನೆಲುಬಿನಿಂದ 2.5 ಇಂಚು ಉದ್ದದ ಚಾಕು ಹೊರತೆಗೆಯಲಾಗಿತ್ತು. ಇಂದು ನಟ ಡಿಸ್ಚಾರ್ಜ್ ಆಗಿದ್ದಾರೆ. ಏನೂ ಆಗಿಲ್ಲ ಎಂಬಂತೆ ನಡೆದು ಬಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.
ಕಳೆದ ಗುರುವಾರ ಮುಂಜಾನೆ (ಬುಧವಾರ ತಡರಾತ್ರಿ) ನಟನ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿ ಭೀಕರ ಹಲ್ಲೆ ನಡೆಸಿದ್ದ. ಚಾಕುವಿನಿಂದ ಇರಿದು ನಟನನ್ನು ಗಾಯಗೊಳಿಸಿದ್ದ. ಸೈಫ್ ಅಲಿ ಖಾನ್ ಮೈ ಮೇಲೆ 6 ಗಂಭೀರ ಗಾಯಗಳಾಗಿದ್ದವು. ದುರಂತ ನಡೆದ ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಆದ್ರಿಂದು ಏನೂ ಆಗಿಲ್ಲ ಅನ್ನೋವಂತೆ ಗಜಗಾಂಭೀರ್ಯದಿಂದ ನಡೆದು ಬಂದಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಹಲ್ಲೆ ನಡೆದು ಕೇವಲ 5 ದಿನಗಳಾಗಿವೆಯಷ್ಟೇ, ಹಾಗಾಗಿ ಇಂದು ಅವರನ್ನು ನೋಡಿದ ಅಭಿಮಾನಿಗಳು ಚಕಿತರಾಗಿದ್ದಾರೆ.
ಐದು ದಿನಗಳ ಹಿಂದಷ್ಟೇ ನಟನ ಮನೆಯಲ್ಲಿ ಕಳ್ಳತನದ ಯತ್ನ ನಡೆದಿತ್ತು. ಅಪರಿಚಿತ ವ್ಯಕ್ತಿಯೊಂದಿಗಿನ ಹೋರಾಟದಲ್ಲಿ ನಟ ಗಂಭೀರ ಇರಿತಕ್ಕೊಳಗಾಗಿ, ಕೂಡಲೇ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾದರು. ದಾಖಲಾದ ಕೂಡಲೇ ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ಬೆನ್ನೊಳಗೆ ಸಿಲುಕಿದ್ದ 2.5 ಇಂಚು ಉದ್ದದ ಚಾಕುವನ್ನು ಹೊರತೆಗೆಯಲಾಗಿತ್ತು. ವೈದ್ಯರ ತಂಡ ಒದಗಿಸಿದ ಸೂಕ್ತ ಚಿಕಿತ್ಸೆಗೆ ಸ್ಪಂದಿಸಿದ ನಟ, ಬಹುತೇಕ ಚೇತರಿಸಿಕೊಂಡಿದ್ದಾರೆ. ಈ ಹಿಂದೆ ವೈದ್ಯರ ತಂಡವೇ ಹೆಲ್ತ್ ಅಪ್ಡೇಟ್ ಒದಗಿಸಿತ್ತು. ಇಂದು ತಮ್ಮ ಮನೆಗೆ ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ಸೈಫ್ಗೆ ಚಾಕುವಿನಿಂದ ಇರಿದ ಬಳಿಕ ಆರೋಪಿ ಚೆನ್ನಾಗಿ ನಿದ್ರಿಸಿದ್ದ, ಬಟ್ಟೆ ಬದಲಿಸಿ ಪ್ರಯಾಣ ಬೆಳೆಸಿದ್ದ: ಪೊಲೀಸ್
ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 54ರ ಹರೆಯದ ನಟ ಆರಾಮಾಗಿ ತಮ್ಮ ಕಾರು ಹತ್ತಿದರು. ನಂತರ ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿರುವ ತಮ್ಮ ನಿವಾಸ ತಲುಪಿದರು. ಬಾಂದ್ರಾದ 'ಸತ್ಗುರು ಶರಣ್' ಕಟ್ಟಡದಲ್ಲಿರುವ ತಮ್ಮ ಮನೆಗೆ ವಾಪಸ್ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಪಾಪರಾಜಿಗಳು ವಿಡಿಯೋ ಹಂಚಿಕೊಂಡಿದ್ದಾರೆ.
ಘಟನೆಯಲ್ಲಿ, ನಟನ ಕೈಯಲ್ಲಿ ಎರಡು ಮತ್ತು ಕುತ್ತಿಗೆಯ ಬಲಭಾಗದಲ್ಲಿ ಒಂದು ಗಾಯ ಹಾಗೇ ಬೆನ್ನುಮೂಳೆಯಲ್ಲಿ ಗಂಭೀರ ಗಾಯವಾಗಿತ್ತು. ಬೆನ್ನುಮೂಳೆಯಲ್ಲಿ ಸಿಲುಕಿಕೊಂಡಿದ್ದ ಬ್ಲೇಡ್ ಅನ್ನು ವೈದ್ಯರು ಹೊರತೆಗೆದಿದ್ದರು. ಎರಡು ಪ್ರಮುಖ ಶಸ್ತ್ರಚಿಕಿತ್ಸೆ - ನರಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಖಾನ್ ಚಿಕಿತ್ಸೆಗೆ ಸ್ಪಂದಿಸಿ ಶೀಘ್ರವೇ ಚೇತರಿಸಿಕೊಂಡರು, ಜನವರಿ 17 ರಂದು ಐಸಿಯು ನಿಂದ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
ಈ ಹಲ್ಲೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ತನಿಖೆ ಸಾಗಿದೆ.