ಜೈಪುರ, ರಾಜಸ್ಥಾನ: ಆಂಬ್ಯುಲೆನ್ಸ್ ಬಾಗಿಲು ಜಾಮ್ ಆಗಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಭಿಲ್ವಾರಾ ಪಟ್ಟಣದಲ್ಲಿ ನಡೆದಿದೆ.
45 ವರ್ಷದ ಸುಲೇಖಾ ಎಂಬುವರು ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನೂ ಬದುಕಿದ್ದ ಅವರನ್ನು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಗೆ ಬಂದಾಗ ಆಂಬ್ಯುಲೆನ್ಸ್ ಬಾಗಿಲು ಜಾಮ್ ಆಗಿದ್ದರಿಂದ ವಾಹನದ ಕಿಟಕಿಯ ಗಾಜು ಒಡೆದು ಮಹಿಳೆಯನ್ನು ಹೊರತೆಗೆಯಬೇಕಾಯಿತು. ಆದರೆ ಇಷ್ಟೆಲ್ಲ ಆಗುವಷ್ಟರಲ್ಲಿ ತುಂಬಾ ತಡವಾಗಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಬಾಗಿಲುಗಳು ಜಾಮ್ ಆದ ಕಾರಣ ಅಮೂಲ್ಯ ಸಮಯ ವ್ಯರ್ಥವಾಗಿ ಆಕೆ 15 ನಿರ್ಣಾಯಕ ನಿಮಿಷಗಳ ಕಾಲ ವಾಹನದಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಬಾಗಿಲುಗಳು ಜಾಮ್ ಆಗಿದ್ದರಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ಆಂಬ್ಯುಲೆನ್ಸ್ ಆಪರೇಟಿಂಗ್ ಸರ್ವೀಸ್ ಪ್ರೊವೈಡರ್ ಕಂಪನಿ ಎಎಂಆರ್ಐಜಿಎಚ್ಎಸ್ (EMRIGHS) ನಿರಾಕರಿಸಿದೆ. ಆಂಬ್ಯುಲೆನ್ಸ್ಗೆ ಮಹಿಳೆಯನ್ನು ಸಾಗಿಸುವ ಸಮಯದಲ್ಲಿಯೇ ಆಕೆ ಜೀವಂತವಾಗಿರುವ ಯಾವುದೇ ಲಕ್ಷಣಗಳಿರಲಿಲ್ಲ ಎಂಬುದನ್ನು ಸಾಬೀತುಪಡಿಸಲು ದಾಖಲೆ ಪುರಾವೆಗಳಿವೆ ಎಂದು ಅದು ಹೇಳಿದೆ.
ಜಿಲ್ಲಾಧಿಕಾರಿ ನಮಿತ್ ಮೆಹ್ತಾ ಅವರು ಈ ಪ್ರಕರಣದ ತನಿಖೆಯನ್ನು ಸಹಾಯಕ ಕಲೆಕ್ಟರ್ ಅರುಣ್ ಜೈನ್ ಅವರಿಗೆ ಹಸ್ತಾಂತರಿಸಿದ್ದಾರೆ. ಭಿಲ್ವಾರಾದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಸಿ.ಪಿ. ಗೋಸ್ವಾಮಿ ಅವರು ಘಟನೆಯ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದಾರೆ.
"ಈ ಬಗ್ಗೆ ತನಿಖೆ ನಡೆಸಲು ಮತ್ತು ಆದಷ್ಟು ಬೇಗ ವರದಿಯನ್ನು ಸಲ್ಲಿಸಲು ನಾಲ್ಕು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ" ಎಂದು ಗೋಸ್ವಾಮಿ ಹೇಳಿದರು.(PTI)
ಇದನ್ನೂ ಓದಿ: ಸೈಫ್ ಮೇಲಿನ ದಾಳಿಕೋರ 7 ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ, ಬೇರೋಬ್ಬರ ಹೆಸರಲ್ಲಿ ಸಿಮ್ ಕೂಡ ಪಡೆದಿದ್ದ! - ATTACK ON SAIF