ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಇತಿಹಾಸ ನಮ್ಮದು. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು ನಾವಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ನಮ್ಮ ಜೀವ ಕೊಡಲು ನಾವು ಸಿದ್ಧರಿದ್ದೇವೆ. ದುಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಜೊತೆ ನೀವು ಹೋರಾಟಕ್ಕೆ ಸಂಕಲ್ಪ ತೊಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕರೆ ನೀಡಿದರು.
ಬೆಳಗಾವಿ ಸಿಪಿಇಡ್ ಮೈದಾನದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿ ನೆನಪಿಗಾಗಿ ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿ ಗಮನ ಸೆಳೆದರು. ಭಾಷಣದ ಉದ್ದಕ್ಕೂ ಕೈಯಲ್ಲಿ ಸಂವಿಧಾನ ಗ್ರಂಥ ಹಿಡಿದೇ ಪ್ರಿಯಾಂಕಾ ಅವರು ಮಾತನಾಡಿದರು.
ಸಂವಿಧಾನ ಕೇವಲ ಪುಸ್ತಕ ಅಲ್ಲ. ಎಲ್ಲ ಸಹೋದರ, ಸಹೋದರಿಯರೇ ತಮ್ಮೆಲ್ಲರನ್ನು ಕಾಪಾಡುವ ರಕ್ಷಾ ಕವಚ. ಇಂತಹ ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ನಿಂತು ಕೇಂದ್ರ ಗೃಹಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ. ಇಂಥ ಸರ್ಕಾರ ಮತ್ತು ಮಂತ್ರಿಯನ್ನು ಹಿಂದೆಂದೂ ನೋಡಿರಲಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮೇಲಿನ ಅಪಮಾನ ಸಹಿಸಬೇಡಿ. ಸಂವಿಧಾನ ರಕ್ಷಿಸಲು ತಮ್ಕ ಪ್ರಾಣ ತ್ಯಾಗ ಮಾಡುವ ಸಂಕಲ್ಪ ಮಾಡಿರಿ ಎಂದು ಕರೆ ನೀಡಿದರು.
ಬಂಡವಾಳ ಶಾಹಿಗಳ ಸಾಲಮನ್ನಾ: ಇಂದು ರೈತ ನೂರಾರು ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾನೆ. 1 ಲಕ್ಷ ರೂ. ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ ಗಗನಕ್ಕೇರಿದೆ. ರೈತ ಸಾಲದಲ್ಲಿ ಮುಳುಗುತ್ತಿದ್ದಾನೆ. ಟೂತ್ ಪೆಸ್ಟ್, ಚಹಾಪುಡಿ, ಕಾಫಿ, ಬ್ರೆಡ್, ತಿಂಡಿ, ಮಕ್ಕಳ ಸಮವಸ್ತ್ರ, ಪುಸ್ತಕ, ಪೆನ್ನು, ಬೂಟು, ಪಾದರಕ್ಷೆ ಸೇರಿ ಎಲ್ಲದರ ಮೇಲೂ ಜಿಎಸ್ ಟಿ ಹೇರಿದ್ದಾರೆ. ಅದಾನಿ, ಅಂಬಾನಿಗಳು ಟ್ಯಾಕ್ಸ್ ಹೆಚ್ಚಿಸಿದ್ದಾರಾ..? ಅಲ್ಲದೇ ಬಂಡವಾಳ ಶಾಹಿಗಳ 17 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2024ರ ಚುನಾವಣೆಯಲ್ಲಿ ಹಲವು ಕಡೆಗಳಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಭಾಷಣ ಮಾಡಿದ್ದರು. ಅವರು, ದೇಶದ ಮೂಲ ತತ್ವ, ಸಿದ್ಧಾಂತ, ವಿವಿಧತೆಯಲ್ಲಿ ಏಕತೆಗಳ ಮೇಲೆ ಆಕ್ರಮಣ ಮಾಡಿ, ಅವುಗಳನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ. ಆರ್ಎಸ್ಎಸ್ ಸಂಸ್ಥಾಪಕರು ಸಂವಿಧಾನ ವಿರೋಧಿ ಆಗಿದ್ದರು. ಮೊದಲ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಂವಿಧಾನ ವಿಮರ್ಶೆ ಶುರು ಮಾಡಿದರು. ಮೀಸಲಾತಿ, ಸಾಮಾಜಿಕ ನ್ಯಾಯದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ತಮಗೆ ಶಕ್ತಿ ತುಂಬಿದ ಆರ್ಟಿಐ ಬದಲಿಸುತ್ತಿದ್ದಾರೆ. ಲೋಕಪಾಲ್ ಕಾಯ್ದೆ, ಚುನಾವಣೆ ಆಯೋಗದ ಶಕ್ತಿ ಕುಗ್ಗಿಸಿದ್ದಾರೆ. ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದವರ ಪರ ನಿಲ್ಲುತ್ತಾರೆ. ಕಾರ್ಮಿಕರ ಹಕ್ಕು ಕಸಿದು ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು
ರಾಹುಲ್ ಅನಾರೋಗ್ಯ: ಅನಾರೋಗ್ಯದಿಂದ ನಮ್ಮ ಅಣ್ಣ ರಾಹುಲ್ ಗಾಂಧಿ ಅವರು ಸಮಾವೇಶಕ್ಕೆ ಬರಲು ಆಗಿಲ್ಲ. ದೇಶಕ್ಕಾಗಿ ರಾಹುಲ್ ಗಾಂಧಿ ಪ್ರತಿಕ್ಷಣ ಹೋರಾಡುತ್ತಿದ್ದಾರೆ. ರಾಹುಲ್ ಸಂವಿಧಾನದ ಪರವಾಗಿ ಆಡುವ ಮಾತನ್ನು ತಡೆಯುತ್ತಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿಗೆ ರಾಹುಲ್ ಬಗ್ಗೆ ಭಯವಿದೆ. ರಾಹುಲ್ ಸತ್ಯದ ಪರವಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ರಾಹುಲ್ ಗಾಂಧಿ ಅವರನ್ನು ನೋಡಿದರೆ ಬಿಜೆಪಿಗರು ಹೆದರುತ್ತಾರೆ. ಅವರ ವಿರುದ್ಧ ನೂರಾರು ಕೇಸ್ ಹಾಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ನಾಯಕರು ಮತ್ತು ನಾನು ಕೂಡ ಹೆದರಲ್ಲ. ಯಾಕೆಂದರೆ ಸತ್ಯ ನಿಷ್ಠೆ ಮೇಲೆ ನಾವು ಹೋರಾಡುತ್ತಿದ್ದೇವೆ. ಸಂವಿಧಾನವೇ ನಮ್ಮ ಸಿದ್ಧಾಂತ. ಸಮಾನತೆ, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನರಿಗಾಗಿ ನಮ್ಮ ಜೀವ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅಂದು ಗಾಂಧೀಜಿಗೆ ಅನ್ನ - ಸಾರು ಊಟೋಪಚಾರ ಮಾಡಿದ್ದೆ; ಬಾಪು ಸ್ಮರಿಸಿದ 105ರ ಅಜ್ಜಿ
ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧ ಮುಂದೆ ಗಾಂಧೀಜಿ ಪ್ರತಿಮೆ ಅನಾವರಣ