ಕರ್ನಾಟಕ

karnataka

ETV Bharat / bharat

ವಯನಾಡು ಲೋಕಸಭಾ ಉಪಚುನಾವಣೆ: ಇಂದು ಪ್ರಿಯಾಂಕಾ ಗಾಂಧಿ ಭವಿಷ್ಯ ನಿರ್ಧಾರ - KERALA BYPOLLS

ವಯನಾಡ್​ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಉಪಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್​ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿಯಾಗಿ ನವ್ಯ ಹರಿದಾಸ್ ಸ್ಪರ್ಧಿಸುತ್ತಿದ್ದಾರೆ.

Priyanka
ಪ್ರಿಯಾಂಕಾ ಗಾಂಧಿ ವಾದ್ರಾ (ETV Bharat)

By ETV Bharat Karnataka Team

Published : Nov 22, 2024, 11:02 PM IST

ವಯನಾಡು (ಕೇರಳ): ಕೇರಳದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಜತೆಗೆ ವಯನಾಡು ಲೋಕಸಭೆಗೂ ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಮತಗಳ ಎಣಿಕೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫಲಿತಾಂಶದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ದಕ್ಷಿಣ ರಾಜ್ಯದಿಂದ ಚುನಾವಣಾ ಕಣಕ್ಕೆ ಅವರು ಪದಾರ್ಪಣೆ ಮಾಡಿದ್ದಾರೆ. ಹೀಗಾಗಿ ಈ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.

ವಯನಾಡು ಲೋಕಸಭಾ ಕ್ಷೇತ್ರವು ಮಾನಂತವಾಡಿ (ಎಸ್​ಟಿ), ಸುಲ್ತಾನ್ ಬತ್ತೇರಿ (ಎಸ್​ಟಿ), ಕಲ್ಪೆಟ್ಟಾ, ಕೋಯಿಕ್ಕೋಡ್ ಜಿಲ್ಲೆಯ ತಿರುವಂಬಾಡಿ ಮತ್ತು ಮಲಪ್ಪುರಂ ಜಿಲ್ಲೆಯ ಎರನಾಡ್, ನಿಲಂಬೂರ್ ಮತ್ತು ವಂಡೂರ್ ಎಂಬ 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್​ ಗಾಂಧಿ ವಯನಾಡುನಿಂದ ಗೆಲುವು ಕಂಡಿದ್ದರು. ರಾಯಬರೇಲಿ ಕ್ಷೇತ್ರದಲ್ಲೂ ಅವರು ಗೆದ್ದಿರುವ ಹಿನ್ನೆಲೆ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಉಪಚುನಾವಣೆಯನ್ನು ಕ್ಷೇತ್ರದ ಜನರು ಎದುರಿಸುತ್ತಿದ್ದಾರೆ.

ವಯನಾಡ್‌ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಉಪಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಿಪಿಐ(ಎಂ)ನಿಂದ ಸತ್ಯನ್​ ಮೊಕೆರಿ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿಯಾಗಿ ನವ್ಯ ಹರಿದಾಸ್​ ಕಣದಲ್ಲಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ಇದು ಅತ್ಯಂತ ಕಡಿಮೆ ಶೇಕಡಾವಾರು ಮತದಾನ ಎಂದು ಹೇಳಾಗುತ್ತಿದೆ. 2009ರಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದ ರಚನೆಯಾಗಿದ್ದು, ಅದೇ ವರ್ಷ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸಿತ್ತು. ಆ ವರ್ಷ 74.14% ಮತದಾನವಾಗಿತ್ತು.

2014ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ.73.25ರಷ್ಟು ಮತದಾನವಾಗಿದ್ದರೆ, 2019ರಲ್ಲಿ ಶೇ.80.33ರಷ್ಟು ಮತದಾನವಾಗಿತ್ತು. ಅದೇ ವರ್ಷ ಅಚ್ಚರಿಯ ರೀತಿ ವಯನಾಡ್ ಚುನಾವಣಾ ಕಣದಿಂದ ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ಗೆದ್ದು ಸಂಸತ್​ ಪ್ರವೇಶ ಮಾಡಿದ್ದರು.

ಈ ವರ್ಷ (2024) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಶೇ.72.92ರಷ್ಟು ಮತದಾನ ದಾಖಲಾಗಿತ್ತು. 2019ರ ಚುನಾವಣೆಗೆ ಹೋಲಿಸಿದರೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.7ರಷ್ಟು ಮತದಾನ ಕಡಿಮೆಯಾಗಿತ್ತು.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಎರಡು ಕಡೆ ಸ್ಪರ್ಧಿಸಿದ್ದರು. ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಬುಧವಾರ ಉಪಚುನಾವಣೆ ನಡೆಸಲಾಯಿತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ​ ನಾಯಕಿ ಪ್ರಿಯಾಂಕಾ ಗಾಂಧಿ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜಕೀಯ ಪದಾರ್ಪಣೆ ಮಾಡಿದ ಕ್ಷೇತ್ರ ಇದಾಗಿದ್ದರಿಂದ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ನವ್ಯಾ ಹರಿದಾಸ್ ಹಾಗೂ ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.

ಮತ ಪ್ರಮಾಣ ಕುಸಿಯಲು ಏನು ಕಾರಣ? ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 14,64,472 ಮತಗಳ ಪೈಕಿ 10,74,623 ಮತಗಳು ಚಲಾವಣೆಯಾಗಿದ್ದವು. ಈ ಬಾರಿ ಒಟ್ಟು 14,71,742 ಮತಗಳ ಪೈಕಿ 9,52,543 ಮತಗಳು ಮಾತ್ರ ಚಲಾವಣೆಯಾಗಿವೆ. ಮತದಾರರಲ್ಲಿ ನಿರಾಸಕ್ತಿ, ತಾವು ಮತ ​​ಚಲಾಯಿಸದಿದ್ದರೂ ಯುಡಿಎಫ್ ಗೆಲ್ಲುತ್ತದೆ ಎಂಬ ನಂಬಿಕೆ ಮತ್ತು ಅನಿವಾಸಿ ಮತದಾರರ ಕೊರತೆ, ಇವೆಲ್ಲವೂ ಮತದಾನದ ಕುಸಿತಕ್ಕೆ ಕಾರಣವಾಗಿವೆ ಎಂದು ವರದಿಯಾಗಿದೆ.

ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ಉಭಯ ಪಕ್ಷಗಳ ನಾಯಕರು ಅವರವರ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ರಾಷ್ಟ್ರೀಯ ನಾಯಕರು ಕೂಡ ಬಂದು ಅಬ್ಬರ ಪ್ರಚಾರ ಕೈಗೊಂಡಿದ್ದರು. ಆದರೂ, ಮತದಾನದ ಪ್ರಮಾಣದ ಕುಸಿದಿರುವುದು ಅಭ್ಯರ್ಥಿಗಳಲ್ಲಿ ಭಯ ಹುಟ್ಟಿಸಿದೆ.

ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಶೇ.8.85ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ತಮ್ಮ ಸಹೋದರನನ್ನು ಗೆಲ್ಲಿಸಿದ್ದ ವಯನಾಡು ಜನರು ತಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಪ್ರಿಯಾಂಕಾ ಗಾಂಧಿ ಇದ್ದರೆ, ಸ್ಥಳೀಯರ ಬೆಂಬಲದಿಂದ ಬಿಜೆಪಿ ಮತ್ತಷ್ಟು ಬಲಶಾಲಿಯಾಗಿದೆ. ಸಾರ್ವಜನಿಕ ಸಭೆಗಳಲ್ಲೂ ಇದನ್ನು ನಾವು ಕಂಡಿದ್ದೇವೆ. ಮೊದಲಿಗಿಂತ ಈ ಬಾರಿ ಸಮಾವೇಶಗಳಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿದೆ ಎಂದು ಬಿಜೆಪಿಯ ನವ್ಯಾ ಹರಿದಾಸ್ ಆತ್ಮವಿಶ್ವಾಸ ಹೊರಹಾಕಿದ್ದಾರೆ. ಎಲ್ಲದಕ್ಕೂ ಫಲಿತಾಂಶದ ದಿನ ಉತ್ತರ ಸಿಗಲಿದೆ.

ಇದನ್ನೂ ಓದಿ :'ಉತ್ತಮ ಭವಿಷ್ಯ ನಿರ್ಮಿಸಲು ಮತ ಚಲಾಯಿಸಿ': ವಯನಾಡ್ ಮತದಾರರಿಗೆ ಪ್ರಿಯಾಂಕಾ ಗಾಂಧಿ ಕರೆ

ABOUT THE AUTHOR

...view details