ನವದೆಹಲಿ: ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಬಿಭವ್ ಕುಮಾರ್ ಬಿಡುಗಡೆಯಾಗುತ್ತಿದ್ದಂತೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಮಾಡಿರುವ ಪೋಸ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಆತನ ಫೋಟೋ ಹಂಚಿಕೊಂಡು ದೊಡ್ಡ ನೆಮ್ಮದಿಯ ದಿನ ಎಂದು ಸುನೀತಾ ಕೇಜ್ರಿವಾಲ್ ಪೋಸ್ಟ್ ಮಾಡಿದ್ದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಎಪಿ ರಾಜ್ಯ ಸಭಾ ಸದಸ್ಯೆ ಸ್ವಾತಿ ಮಾಲಿವಾಲ್, ಅವರಿಗೆ ನೆಮ್ಮದಿ ಏಕೆಂದರೆ, ಅವರ ಮನೆಯಲ್ಲಿಯೇ ನನ್ನ ಮೇಲೆ ಹಲ್ಲೆ ಮತ್ತು ಅನುಚಿತ ವರ್ತನೆ ತೋರಿದಾತನಿಗೆ ಜಾಮೀನು ಸಿಕ್ಕಿದೆ. ಆತ ನನ್ನ ಮೇಲೆ ಹಲ್ಲೆ ಮಾಡುವಾಗ ಮುಖ್ಯಮಂತ್ರಿ ಹೆಂಡತಿ ಅಲ್ಲಿಯೇ ಇದ್ದರು. ಅವರಿಗೆ ಅಂದು ಬಹಳ ನೆಮ್ಮದಿ ಎನಿಸಿತು ಎಂದು ಪೋಸ್ಟ್ನಲ್ಲಿ ಟೀಕಿಸಿದ್ದಾರೆ.
ಇದೇ ವೇಳೆ ತಮ್ಮ ಅಸಮಾಧಾನ ಮುಂದುವರೆಸಿ ಪೋಸ್ಟ್ ಮಾಡಿರುವ ಅವರು, ಮಹಿಳೆ ವಿರುದ್ಧ ಅಪರಾಧ ನಡೆಸಲು ಇವರಿಗೆ ಪಕ್ಷ ,ಮುಕ್ತ ಲೈಸೆನ್ಸ್ ನೀಡಿದೆ. ಬಳಿಕ ಕೋರ್ಟ್ನಲ್ಲಿ ಉತ್ತಮ ವಕೀಲರ ಮೂಲಕ ಅವರ ರಕ್ಷಣೆ ಮಾಡುತ್ತಾರೆ. ದೇವರು ಎಲ್ಲವನ್ನು ನೋಡುತ್ತಿದ್ದಾನೆ. ನ್ಯಾಯ ಸಿಗುತ್ತದೆ ಎಂದಿದ್ದಾರೆ.
ಸುನೀತಾ ಕೇಜ್ರಿವಾಲ್ ಅವರ ಪೋಸ್ಟ್ ಕುರಿತು ಬಿಜೆಪಿ ಕೂಡ ಟೀಕಿಸಿದ್ದು, ಮಹಿಳೆಯರಿಗೆ ನ್ಯಾಯಾ ಎಲ್ಲಿದೆ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿದೆ.
ಮೇ 13ರಂದು ದೆಹಲಿ ಮುಖ್ಯಮಂತ್ರಿ ಬಿಭವ್ ಕುಮಾರ್ , ಮುಖ್ಯಮಂತ್ರಿಗಳ ಮನೆಯಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಸ್ವಾತಿ ಮಾಲಿವಾಲ್ ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಅವರು 100 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು. ಸೋಮವಾರ ಸುಪ್ರೀಂಕೋರ್ಟ್, ಕುಮಾರ್ ಅವರನ್ನು ದೆಹಲಿ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿಯಾಗಿ ಮುಂದುವರೆಯುವಂತಿಲ್ಲ. ಮುಖ್ಯಮಂತ್ರಿ ಕಚೇರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಎಲ್ಲ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಅವರು ಸಿಎಂ ನಿವಾಸಕ್ಕೆ ಪ್ರವೇಶಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಜಾಮೀನಿನ ಮೇಲೆ ಆತನಿಗೆ ಬಿಡುಗಡೆ ನೀಡಿತು. ಈ ಮೊದಲು ಟ್ರಯಲ್ ಮತ್ತು ಹೈಕೋರ್ಟ್ನಲ್ಲಿ ಬಿಭವ್ ಕುಮಾರ್ ಅರ್ಜಿ ವಜಾಗೊಂಡಿತ್ತು. (ಐಎಎನ್ಎಸ್)
ಇದನ್ನೂ ಓದಿ: ಸ್ವಾತಿ ಮಲಿವಾಲ್ ಪ್ರಕರಣ: ಸಿಎಂ ಕೇಜ್ರಿವಾಲ್ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್‌ಗೆ ಜಾಮೀನು ಮಂಜೂರು