ಅಗರ್ತಲಾ (ತ್ರಿಪುರ): ಈಶಾನ್ಯ ಭಾರತದ ರಾಜ್ಯಗಳಲ್ಲಿ ಒಂದಾದ ತ್ರಿಪುರಾದಲ್ಲಿ ಇಂಧನ ಕೊರತೆ ಉಂಟಾಗಿದ್ದು, ಅಲ್ಲಿನ ಸರ್ಕಾರ ವಾಹನ ಸವಾರರಿಗೆ ನವೆಂಬರ್ 10 ರಿಂದ ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ಅನ್ನು ಮಾರಾಟ ಮಾಡುವುದಾಗಿ ಶನಿವಾರ ತಿಳಿಸಿದೆ.
ಎನ್‌ಎಫ್‌ಆರ್‌ನ ಲುಮ್‌ಡಿಂಗ್ ಮತ್ತು ಬದರ್‌ಪುರ ವಿಭಾಗದ ನಡುವೆ ಇಂಧನ ಪೂರೈಕೆ ರೈಲು ಹಳಿ ತಪ್ಪಿದ್ದು, ರಾಜ್ಯಕ್ಕೆ ಬರಬೇಕಿದ್ದ ಇಂಧನದಲ್ಲಿ ವ್ಯತ್ಯಯವಾಗಿದೆ. ಇದು ಪೂರೈಕೆಯಲ್ಲಿ ಪರಿಣಾಮ ಬೀರಿರುವುದರಿಂದ ಸರ್ಕಾರವು ನವೆಂಬರ್ 10 ರಿಂದ ಪೆಟ್ರೋಲ್ ಅನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ ಎಂದು ತ್ರಿಪುರಾ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸುಶಾಂತ ಚೌಧರಿ ಶನಿವಾರ ಹೇಳಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ದಿನಕ್ಕೆ 200 ರೂಪಾಯಿ ಪೆಟ್ರೋಲ್ ಸಿಗಲಿದೆ. ತ್ರಿಚಕ್ರ ವಾಹನಗಳಿಗೆ 400 ರೂಪಾಯಿ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 1,000 ರೂಪಾಯಿ ಪೆಟ್ರೋಲ್ ಮಾತ್ರ ಸಿಗಲಿದೆ ಎಂದು ಸಚಿವರು ಹೇಳಿದರು.
ಲುಮ್ಡಿಂಗ್ ಮತ್ತು ಬದರ್‌ಪುರ ನಡುವಿನ ರೈಲು ಟ್ರ್ಯಾಕ್ ಹಾಳಾಗಿದೆ. ಇದು ರಾಜ್ಯದ ಇಂಧನ ಸಂಗ್ರಹಣೆಯಲ್ಲಿ ತೀವ್ರ ಇಳಿಕೆ ಉಂಟು ಮಾಡಿದೆ. ಆದ್ದರಿಂದ, ಇಂಧನವನ್ನು ಮಿತವಾಗಿ ಬಳಸಲು ಉದ್ದೇಶಿಸಲಾಗಿದೆ. ಅದರಲ್ಲೂ ಪೆಟ್ರೋಲ್ ಮಾರಾಟಕ್ಕೆ ರಾಜ್ಯ ಸರ್ಕಾರ ಭಾನುವಾರದಿಂದ ನಿಯಮ ವಿಧಿಸುತ್ತಿದೆ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈಶಾನ್ಯ ಗಡಿ ರೈಲ್ವೆಯ (ಎನ್‌ಎಫ್‌ಆರ್) ಜನರಲ್ ಮ್ಯಾನೇಜರ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನವೆಂಬರ್ 13 ರೊಳಗೆ ರೈಲ್ವೆ ಹಳಿಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾಗಿ ತ್ರಿಪುರಾ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ತಿಳಿಸಿದರು.
ಅಕ್ಟೋಬರ್ 31 ರಂದು ಲುಮ್ಡಿಂಗ್ ಮತ್ತು ಬದರ್‌ಪುರ್ ವಿಭಾಗದ ನಡುವೆ ಇಂಧನ ಟ್ಯಾಂಕರ್ ಹಳಿತಪ್ಪಿದ ಕಾರಣ ಸುಮಾರು 5 ಕಿ.ಮೀ ರೈಲ್ವೆ ಹಳಿಯು ಹಾಳಾಗಿದೆ. ಇದರಿಂದ ತ್ರಿಪುರಾಕ್ಕೆ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: 'ಮಹಾ' ಚುನಾವಣೆಗಾಗಿ ಕರ್ನಾಟಕದಲ್ಲಿ ₹700 ಕೋಟಿ ಲೂಟಿ ಮಾಡಿದ ಕಾಂಗ್ರೆಸ್: ಪ್ರಧಾನಿ ಮೋದಿ ಗಂಭೀರ ಆರೋಪ