ಇಂದೋರ್: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಮೋಹನ್ ಯಾದವ್ ಅವರು ಎರಡು ಕೈಗಳಲ್ಲಿ ಕತ್ತಿ ಹಿಡಿದು ಝಳಪಿಸಿ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಸಾಂಪ್ರದಾಯಿಕ ಕಲೆಯಾದ ಕತ್ತಿವರಸೆ ಪ್ರದರ್ಶಿಸಿದ್ದಾರೆ.
ಇಲ್ಲಿನ ನೆಹರು ಸ್ಟೇಡಿಯಂನಲ್ಲಿ ಅನ್ಮೋಲ್ ಮುಸ್ಕಾನ್ ಕಲ್ಯಾಣ ಸಮಾಜ ಶನಿವಾರ ಆಯೋಜಿಸಿದ್ದ 'ಶೌರ್ಯ ವೀರ' ಕಾರ್ಯಕ್ರಮದಲ್ಲಿ ಸಿಎಂ ಮೋಹನ್ ಯಾದವ್ ಹೊರತಾಗಿ, ಕೇಂದ್ರ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, ಮಾಜಿ ಸಂಸದೆ ಜಯ ಪ್ರದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
"ಇಂದೋರ್‌ನ ಮಹಿಳೆಯರು ಇಂದು ಕತ್ತಿವರಸೆಯಲ್ಲಿ ತಮ್ಮ ಅಸಾಧಾರಣ ಕೌಶಲವನ್ನು ತೋರಿಸಿದರು. ನಾವು ಮಹಿಳೆಯರ ಧೈರ್ಯ, ಶೌರ್ಯದ ಕಥಾನಕಗಳನ್ನು ಎಂದಿಗೂ ಮರೆಯುವುದಿಲ್ಲ" ಎಂದು ಸಿಎಂ ಮೋಹನ್ ಯಾದವ್ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ, ಕಾರ್ಯಕ್ರಮದ ಸಂಘಟಕರಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹಧನ ಪ್ರಕಟಿಸಿದರು.
ಸಂಘಟನಾ ಸಮಿತಿಯ ಸದಸ್ಯ ಕಮಲ್ ಯಾದವ್ ಮಾತನಾಡಿ, " ಇಂದಿನ ಕಾರ್ಯಕ್ರಮದಲ್ಲಿ ಸೀರೆಯುಟ್ಟ 5,000 ಮಹಿಳೆಯರು ಕತ್ತಿ ವರಸೆ ಕಲೆ ಪ್ರದರ್ಶಿಸಿದ್ದಾರೆ" ಎಂದು ಹೇಳಿದರು.
ಇದೇ ವೇಳೆ ಸಿಎಂ ಯಾದವ್, ಲಡ್ಲಿ ಬೆಹ್ನಾ ಯೋಜನೆಯ ತಿಂಗಳ ಕಂತಾದ 1,573 ಕೋಟಿ ರೂಪಾಯಿ ಹಣವನ್ನು ರಾಜ್ಯದ 1.29 ಕೋಟಿ ಮಹಿಳೆಯರ ಖಾತೆಗಳಿಗೆ ವರ್ಗಾಯಿಸಿದರು. ಈ ಯೋಜನೆಯಡಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಪ್ರತಿ ತಿಂಗಳು 1,250 ರೂಪಾಯಿ ವರ್ಗಾಯಿಸುತ್ತಿದೆ.
ಇದನ್ನೂ ಓದಿ: ಸಮೋಸಾ ನಾಪತ್ತೆಗೆ ಸಿಐಡಿ ತನಿಖೆ: 'ಸಮೋಸಾ' ಮೆರವಣಿಗೆ ನಡೆಸಿ ವ್ಯಂಗ್ಯವಾಡಿದ ಬಿಜೆಪಿ