ಜೆಮ್‌ಶೆಡ್‌ಪುರ/ಧನ್‌ಬಾದ್ - ಜಾರ್ಖಂಡ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೀತಿಗಳು ದೇಶದ ರೈತರು, ಕಾರ್ಮಿಕರು ಮತ್ತು ಬಡವರನ್ನು ನಾಶ ಮಾಡುವ ಅಸ್ತ್ರಗಳಾಗಿವೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ದ್ವೇಷ ಬಿತ್ತುವ ಬಿಜೆಪಿ- ಆರ್ಎಸ್ಎಸ್ ಸಿದ್ಧಾಂತ ಮತ್ತು ಪ್ರೀತಿಯಲ್ಲಿ ನಂಬಿಕೆಯುಳ್ಳ I.N.D.I.A ಕೂಟದ ನಡುವೆ ಯುದ್ಧ ನಡೆಯುತ್ತಿದೆ. ಹಿಂಸಾಚಾರ ಮತ್ತು ಏಕತೆಯ ನಡುವಿನ ಹೋರಾಟವೂ ಹೌದು ಎಂದು ಅವರು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು ಭಾರತದಲ್ಲಿ ನಿರುದ್ಯೋಗ ಹೆಚ್ಚಲು ಕಾರಣವಾಗಿವೆ. ನೋಟು ಅಮಾನ್ಯೀಕರಣ, ಜಿಎಸ್‌ಟಿಯು ಬಡವರು, ರೈತರು ಮತ್ತು ಕಾರ್ಮಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿವೆ. ಕಾಂಗ್ರೆಸ್, ಸಂವಿಧಾನವನ್ನು ರಕ್ಷಿಸಲು ಬಯಸುತ್ತದೆ ಎಂದಿದ್ದಾರೆ.
ತೆರಿಗೆಯಿಂದ ಬಡವರ ಲೂಟಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ಹಣ ಹೂಡಿಕೆ ಮಾಡುವ ಬಂಡವಾಳಶಾಹಿಗಳಿಗೆ ಸಂಪತ್ತು ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಉದ್ಯಮಿ ಅದಾನಿ ಮತ್ತು ಅಂಬಾನಿ ಅವರನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರ ವಿಧಿಸುತ್ತಿರುವ ತೆರಿಗೆಯು ಬಡವರನ್ನು ಲೂಟಿ ಮಾಡುವುದಾಗಿದೆ. ಸಿರಿವಂತ ಉದ್ಯಮಿ ಅದಾನಿ ಸಾಮಾನ್ಯ ಜನರಷ್ಟೇ ತೆರಿಗೆ ಪಾವತಿಸುತ್ತಾರೆ. ಒಂದು ಲಕ್ಷ ಕೋಟಿ ಮೌಲ್ಯದ ಧಾರಾವಿ (ಮುಂಬೈ) ಭೂಮಿಯನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಗಾಂಧಿ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, ಅವರು ದುಬಾರಿ ವೆಚ್ಚದಲ್ಲಿ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, ದೇಶದ ಬಡವರು ಮತ್ತು ಮಹಿಳೆಯರು ಬೆಲೆ ಏರಿಕೆಯ ಭಾರ ಹೊರುತ್ತಿದ್ದಾರೆ. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಮತ್ತು ಇತರ ಹಿಂದುಳಿದ ವರ್ಗಗಳು ಭಾರತದ ಜನಸಂಖ್ಯೆಯ ಶೇಕಡಾ 90 ರಷ್ಟಿದ್ದಾರೆ. ಆದರೆ ಅವರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮತ್ತು ಮೀಸಲಾತಿಯ ಮೇಲಿನ 50% ಮಿತಿಯನ್ನು ತೆಗೆದುಹಾಕುತ್ತೇವೆ. ಪ್ರಧಾನಿ ಮೋದಿ ಮನ್ನಾ ಮಾಡಿದ ಬಂಡವಾಳಶಾಹಿಗಳ ಸಾಲಕ್ಕೆ ಸಮನಾದ ಹಣವನ್ನು ಬಡವರಿಗೆ ನೀಡುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
ಅಜಾನ್ಗಾಗಿ ಭಾಷಣ ನಿಲ್ಲಿಸಿದ ರಾಹುಲ್: ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ಸಮೀಪವೇ ಇದ್ದ ಮಸೀದಿಯಲ್ಲಿ ಅಜಾನ್ ಕೂಗಲು ಆರಂಭಿಸಿದರು. ಈ ವೇಳೆ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಅಜಾನ್ ಕೂಗಲಾಗುತ್ತಿದೆ ಎಂದು ತಿಳಿಸಿದಾಗ, ರಾಹುಲ್ ಗಾಂಧಿ ಅವರು ಕೆಲ ನಿಮಿಷಗಳ ಕಾಲ ಭಾಷಣ ನಿಲ್ಲಿಸಿ, ಬಳಿಕ ಮರು ಆರಂಭಿಸಿದರು.
ಇದನ್ನೂ ಓದಿ: 'ಮಹಾ' ಚುನಾವಣೆಗಾಗಿ ಕರ್ನಾಟಕದಲ್ಲಿ ₹700 ಕೋಟಿ ಲೂಟಿ ಮಾಡಿದ ಕಾಂಗ್ರೆಸ್: ಪ್ರಧಾನಿ ಮೋದಿ ಗಂಭೀರ ಆರೋಪ