ಸೊಪೊರ್(ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಬಾರಮುಲ್ಲಾ ಜಿಲ್ಲೆಯ ಸೊಪೊರ್‌ನಲ್ಲಿ ಶನಿವಾರ ಸಂಜೆ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಸೇನೆ ಮಾಹಿತಿ ನೀಡಿದೆ.
"ಬಾರಮುಲ್ಲಾ ಜಿಲ್ಲೆಯ ಸೊಪೊರ್ ಪ್ರದೇಶದ ರಾಜ್‌ಪೊರಾ ಎಂಬಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಶೋಧ ಕಾರ್ಯಾಚರಣೆಯ ವೇಳೆ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ" ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ 'ಎಕ್ಸ್' ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದೆ.
Update : OP RAJPURA, #Baramulla
— Chinar Corps🍁 - Indian Army (@ChinarcorpsIA) November 9, 2024
One terrorist has been neutralised by the security forces in the ongoing Operation in general area Rajpura, Sopore, Baramulla.
Search Operation is in progress.#Kashmir@adgpi@NorthernComd_IA
ಕಾಶ್ಮೀರ ಪೊಲೀಸರು ಕೂಡಾ ಮಾಹಿತಿ ನೀಡಿದ್ದು, ಈ ಪ್ರದೇಶದಲ್ಲಿ ಉಗ್ರರ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಸಿಕ್ಕ ತಕ್ಷಣ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದವು ಎಂದು ಹೇಳಿದ್ದಾರೆ. ಕಾಶ್ಮೀರ ವಲಯ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ, "ಪೊಲೀಸರು ಮತ್ತು ಭದ್ರತಾ ಪಡೆಗಳು ನಿಖರ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದವು" ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಪ್ರದೇಶದಲ್ಲಿ ಇಬ್ಬರು ಉಗ್ರರ ಹತ್ಯೆ: ಅಕ್ಟೋಬರ್ 8ರಂದು ಇಬ್ಬರು ಉಗ್ರರನ್ನು ಇದೇ ಸೊಪೊರ್‌ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸದೆಬಡಿದಿದ್ದರು.
ಇದನ್ನೂ ಓದಿ: ಉದಯಪುರದಲ್ಲಿ ಥಾಯ್ಲೆಂಡ್ ಮಹಿಳೆ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು