ನವದೆಹಲಿ:ಮದ್ಯ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿರೋದು ಗೊತ್ತಿರುವ ವಿಚಾರ. ಇದೀಗ ಬಂಧನಕ್ಕೊಳಗಾದಾಗಿನಿಂದ ಕೇಜ್ರಿವಾಲ್ ವೇಗವಾಗಿ ತಮ್ಮ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅತಿಶಿ ಆರೋಪಿಸಿದ್ದಾರೆ. ಅಲ್ಲದೇ, ಸಿಎಂ ಅವರನ್ನು ಜೈಲಿನಲ್ಲಿರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದೂ ದೂರಿದ್ದಾರೆ.
ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಪ್ ರಾಷ್ಟ್ರಿಯ ಸಂಚಾಲಕರೂ ಆದ ಕ್ರೇಜಿವಾಲ್ ಅವರನ್ನು ಬಂಧಿಸಿದ್ದಾರೆ. ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ ಇದ್ದಾರೆ. ಇದರ ನಡುವೆ ಪಕ್ಷವು ಅವರ ಆರೋಗ್ಯದ ಬಗ್ಗೆ ಕಳವಳ ಹೊರಹಾಕಿದೆ. ಇದೇ ವಿಷಯವಾಗಿ ಕಾನೂನು ಸಹಾಯವನ್ನು ಪಡೆಯುವ ಮಾತುಗಳನ್ನಾಡಿದೆ. ಮತ್ತೊಂದೆಡೆ, ಈ ಆರೋಪವನ್ನು ತಿಹಾರ್ ಜೈಲಿನ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಸಿಎಂ ಅವರ ನ್ಯಾಯಾಂಗ ಬಂಧನ ಪ್ರಾರಂಭವಾದಾಗಿನಿಂದ ತೂಕ ಸ್ಥಿರವಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
''ಏಪ್ರಿಲ್ 1ರಂದು ಜೈಲಿಗೆ ಆಗಮಿಸಿದ ನಂತರ ಕೇಜ್ರಿವಾಲ್ ಅವರನ್ನು ಇಬ್ಬರು ವೈದ್ಯರು ಪರೀಕ್ಷಿಸಿದ್ದಾರೆ. ಅವರ ಎಲ್ಲ ಜೀವಾಣುಗಳು ಸಾಮಾನ್ಯವಾಗಿದೆ. ಅವರು ಜೈಲಿಗೆ ಬಂದ ನಂತರ ಮತ್ತು ಇಲ್ಲಿಯವರೆಗೆ ಅವರ ತೂಕವು 65 ಕೆಜಿಯಲ್ಲಿ ಸ್ಥಿರವಾಗಿದೆ. ನ್ಯಾಯಾಲಯದ ಆದೇಶದಂತೆ ಮನೆಯಲ್ಲಿ ಬೇಯಿಸಿದ ಆಹಾರ ನೀಡಲಾಗುತ್ತಿದೆ. ಅವರ ಪ್ರಮುಖ ಅಂಕಿ-ಅಂಶಗಳು ಸ್ಥಿರವಾಗಿವೆ ಎಂದು ಜೈಲಾಧಿಕಾರಿಗಳು ಹೇಳಿಕೆ ಹೊರಡಿಸಿದ್ದಾರೆ.
ಆಪ್ ಆರೋಪವೇನು?: ಕೇಜ್ರಿವಾಲ್ ಆರೋಗ್ಯದ ಆತಂಕ ವ್ಯಕ್ತಪಡಿಸಿರುವ ಸಚಿವೆ ಅತಿಶಿ, ''ಅರವಿಂದ್ ಕೇಜ್ರಿವಾಲ್ ತೀವ್ರ ಮಧುಮೇಹಿ. ತಮ್ಮ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ, ಅವರು ದಿನದ 24 ಗಂಟೆಗಳ ಕಾಲ ಸೇವೆ ನಿರತರಾಗಿದ್ದರು. ಬಂಧನದ ನಂತರ ಕೇಜ್ರಿವಾಲ್ ತೂಕ 4.5 ಕೆಜಿ ಕಡಿಮೆಯಾಗಿದೆ. ಇದು ತುಂಬಾ ಆತಂಕಕಾರಿ. ಅವರನ್ನು ಜೈಲಿಗೆ ಹಾಕುವ ಮೂಲಕ ಬಿಜೆಪಿಯು ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಇಡೀ ದೇಶವಲ್ಲ, ದೇವರು ಕೂಡ ಕ್ಷಮಿಸುವುದಿಲ್ಲ'' ಎಂದು ಅವರು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.