ಪುಣೆ: ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಟೀ ಮಾರಾಟಗಾರನೊಬ್ಬ ಬೋಗಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದ್ದು ಜಲಗಾಂವ್ ರೈಲು ದುರಂತಕ್ಕೆ ಕಾರಣವಾಯಿತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ.
ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ವದಂತಿ ಹರಡಿದ್ದರಿಂದ ಬುಧವಾರ ಲಖನೌ - ಮುಂಬೈ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಚೈನ್ ಎಳೆದು ರೈಲು ನಿಲ್ಲಿಸಿದ್ದರು. ಈ ಸಮಯದಲ್ಲಿ ಕೆಲ ಪ್ರಯಾಣಿಕರು ಗಾಬರಿಯಿಂದ ಬೋಗಿಯಿಂದ ಪಕ್ಕದ ಹಳಿಯ ಮೇಲೆ ಜಿಗಿದಿದ್ದರು. ಆದರೆ ಅದೇ ಸಮಯದಲ್ಲಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಅವರ ಮೇಲೆ ಹರಿದಿದ್ದರಿಂದ ಕನಿಷ್ಠ 13 ಜನ ಸಾವಿಗೀಡಾಗಿ, ಇನ್ನೂ ಹಲವರು ಗಾಯಗೊಂಡ ದುರಂತ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಬುಧವಾರ ಸಂಜೆ ನಡೆದಿತ್ತು.
ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡಿ ಪ್ರಯಾಣಿಕರು ಗಾಬರಿಗೊಂಡಿದ್ದಾರೆ:ಈ ದುರಂತ ಘಟನೆಯ ಬಗ್ಗೆ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಪ್ಯಾಂಟ್ರಿಯಲ್ಲಿದ್ದ ಚಹಾ ಮಾರಾಟಗಾರರೊಬ್ಬರು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದರು. ಆಗ ರೈಲಿನಲ್ಲಿದ್ದ ಉತ್ತರ ಪ್ರದೇಶದ ಶ್ರಾವಸ್ತಿಯ ಇಬ್ಬರು ಪ್ರಯಾಣಿಕರು ಇದನ್ನು ಕೇಳಿಸಿಕೊಂಡು ಇತರರಿಗೂ ಮಾಹಿತಿ ತಲುಪಿಸಿದರು. ಇದರಿಂದ ಅವರು ಪ್ರಯಾಣಿಸುತ್ತಿದ್ದ ಸಾಮಾನ್ಯ ಬೋಗಿ ಮತ್ತು ಪಕ್ಕದ ಬೋಗಿಯಲ್ಲಿ ಗೊಂದಲ ಮತ್ತು ಭೀತಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಭಯಭೀತರಾದ ಕೆಲವು ಪ್ರಯಾಣಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಎರಡೂ ಬದಿಗಳಿಂದ ರೈಲಿನಿಂದ ಜಿಗಿದಿದ್ದಾರೆ ಎಂದು ಪವಾರ್ ಹೇಳಿದರು.