ಜಲಗಾಂವ್ : ಲಕ್ನೋ- ಮುಂಬೈ ಪುಷ್ಪಕ್ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಹೊತ್ತಿಕೊಂಡ ವದಂತಿಯಿಂದಾಗಿ ರೈಲಿನಿಂದ ಕೆಳಗೆ ಜಿಗಿದ ಪ್ರಯಾಣಿಕರ ಮೇಲೆ ಪಕ್ಕದ ಹಳಿಯಲ್ಲಿ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿದೆ.
ಉತ್ತರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಬುಧವಾರ ಸಾಯಂಕಾಲ 5 ಗಂಟೆಗೆ ಈ ದುರಂತ ಸಂಭವಿಸಿದೆ. ಲಕ್ನೋ- ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ವದಂತಿಯಿಂದಾಗಿ ಯಾರೋ ಚೈನ್ ಎಳೆದಿದ್ದರು. ಇದರಿಂದಾಗಿ ಟ್ರೈನ್ ನಿಂತಿದ್ದರಿಂದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ಕೆಳಗಿಳಿದು ಮತ್ತೊಂದು ಟ್ರ್ಯಾಕ್ ಮೇಲೆ ತೆರಳುತ್ತಿರು. ಈ ವೇಳೆ, ಆ ಹಳಿ ಮೇಲೆ ಎದುರಿನಿಂದ ಬರುತ್ತಿದ್ದ ಬೆಂಗಳೂರು-ದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ್ದಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಳಿ ವಕ್ರತೆಯಿಂದಾಗಿ ಸರಿಯಾಗಿ ಕಾಣಿಸದ ರೈಲು : ಪಚೋರಾ ಬಳಿಯ ಮಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ರೈಲು ನಿಂತಾಗ ಪುಷ್ಪಕ್ ಎಕ್ಸ್‌ಪ್ರೆಸ್‌ನ ಲೋಕೋಪೈಲಟ್ ನಿಯಮದ ಪ್ರಕಾರ ಫ್ಲ್ಯಾಷರ್ ಲೈಟ್ ಆನ್ ಮಾಡಿದ್ದರು. ಇದನ್ನು ನೋಡಿ ಕರ್ನಾಟಕ ಎಕ್ಸ್‌ಪ್ರೆಸ್ ಲೋಕೋಪೈಲಟ್ ಕೂಡ ಬ್ರೇಕ್ ಹಾಕಿದ್ದರು. ಹಳಿ ಕರ್ವ್ನಿಂದಾಗಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ಸರಿಯಾಗಿ ಕಾಣಿಸಿಲ್ಲ. ಎರಡೂ ರೈಲುಗಳ ಚಾಲಕರು ಶಿಷ್ಟಾಚಾರ ಪಾಲಿಸಿದ್ದು, ಅಪಘಾತ ತಪ್ಪಿಸಲು ಎಲ್ಲ ಪ್ರಯತ್ನ ಮಾಡಿದ್ದಾರೆ ಎಂದು ಹಿರಿಯ ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ:ರೈಲು ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. "ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ರೈಲ್ವೆ ಹಳಿಗಳಲ್ಲಿ ಸಂಭವಿಸಿದ ದುರಂತದಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಅಧಿಕಾರಿಗಳು ನೀಡುತ್ತಿದ್ದಾರೆ" ಎಂದು ಪ್ರಧಾನಿ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.