ಕರ್ನಾಟಕ

karnataka

ETV Bharat / bharat

ಕುಟುಂಬದ ಆಸ್ತಿಗಳಿಗೆ ಜಗನ್ ಒಡೆಯನಲ್ಲ, ರಕ್ಷಕ ಮಾತ್ರ: ವೈ.ಎಸ್.ಶರ್ಮಿಳಾ ಹೇಳಿಕೆ

ತಮ್ಮ ಕುಟುಂಬದ ಎಲ್ಲ ಆಸ್ತಿಗಳಿಗೆ ಜಗನ್ ಮಾತ್ರ ಮಾಲೀಕನಲ್ಲ ಎಂದು ವೈ.ಎಸ್​.ಶರ್ಮಿಳಾ ಹೇಳಿದ್ದಾರೆ.

ಜಗನ್ ಮೋಹನ್ ರೆಡ್ಡಿ, ವೈಎಸ್​ ಶರ್ಮಿಳಾ
ಜಗನ್ ಮೋಹನ್ ರೆಡ್ಡಿ, ವೈ.ಎಸ್. ಶರ್ಮಿಳಾ (IANS)

By PTI

Published : Oct 25, 2024, 6:54 PM IST

ಅಮರಾವತಿ:ಮಾಜಿ ಮುಖ್ಯಮಂತ್ರಿ, ತಮ್ಮ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಬದುಕಿದ್ದಾಗ ಸ್ಥಾಪಿಸಲಾದ ಎಲ್ಲ ವ್ಯವಹಾರಗಳು ಕುಟುಂಬದ ಆಸ್ತಿಯಾಗಿದ್ದು, ಸಹೋದರ ಜಗನ್ ಅವುಗಳ ಪೋಷಕ ಮಾತ್ರ ಎಂದು ವೈಎಸ್ಆರ್​ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್.ಶರ್ಮಿಳಾ ಶುಕ್ರವಾರ ಹೇಳಿದ್ದಾರೆ.

ಜಗನ್ ಎಲ್ಲ ವ್ಯವಹಾರಗಳನ್ನು ಜಗನ್ ಮತ್ತು ಶರ್ಮಿಳಾ ಅವರ ತಲಾ ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಬೇಕು ಎಂಬುದು ದಿವಂಗತ ತಂದೆ ರಾಜಶೇಖರ ರೆಡ್ಡಿ ಅವರ ಬಯಕೆಯಾಗಿತ್ತು ಎಂದು ಅವರು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ವಿವಿಧ ಕಂಪನಿಗಳಿಂದ ಲಾಭಾಂಶವಾಗಿ ತನ್ನ ಕುಟುಂಬದ ಪಾಲಿನ 200 ಕೋಟಿ ರೂ. ಗಳನ್ನು ಪಡೆದುಕೊಂಡಿದ್ದು, ಇದು ರಾಜಶೇಖರ ರೆಡ್ಡಿ ಅವರ ಎಲ್ಲಾ ನಾಲ್ಕು ಮೊಮ್ಮಕ್ಕಳು ಸಮಾನ ಪಾಲು ಪಡೆಯುವ ಹಕ್ಕನ್ನು ಪ್ರತಿಪಾದಿಸುತ್ತದೆ ಎಂದು ಅವರು ತಿಳಿಸಿದರು.

"ಎಲ್ಲ ಸ್ವತ್ತುಗಳು ಜಗನ್ ಒಡೆತನದಲ್ಲಿಲ್ಲ. ಅವರು ಕುಟುಂಬದ ಒಡೆತನದಲ್ಲಿರುವ ವ್ಯವಹಾರಗಳ "ರಕ್ಷಕ" ಮಾತ್ರ. ಎಲ್ಲ ವ್ಯವಹಾರಗಳನ್ನು ನಾಲ್ಕು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚುವುದು ಜಗನ್ ಅವರ ಜವಾಬ್ದಾರಿಯಾಗಿದೆ. ಇದು (ದಿವಂಗತ) ರಾಜಶೇಖರ ರೆಡ್ಡಿ ಅವರ ಆದೇಶವಾಗಿತ್ತು. ವೈಎಸ್ಆರ್ ತಮ್ಮ ಉದ್ದೇಶವನ್ನು ತಮ್ಮ ಮಕ್ಕಳು ಮತ್ತು ಪತ್ನಿಗೆ ತಿಳಿಸಿದ್ದಾರೆ. ಕೆವಿಪಿ ರಾಮಚಂದ್ರ ರಾವ್, ವೈ.ವಿ.ಸುಬ್ಬಾರೆಡ್ಡಿ ಮತ್ತು ವಿಜಯಸಾಯಿ ರೆಡ್ಡಿ ಸೇರಿದಂತೆ ಆಪ್ತರಿಗೆ ಈ ಬಗ್ಗೆ ತಿಳಿದಿದೆ" ಎಂದು ಶರ್ಮಿಳಾ ತಿಳಿಸಿದ್ದಾರೆ.

ಎಲ್ಲ ಮೊಮ್ಮಕ್ಕಳಿಗೆ ಸಮಾನ ಪಾಲು ಸಿಗಬೇಕು ಎಂದು ನಮ್ಮ ದಿವಂಗತ ತಂದೆಯವರು ಬಯಸಿದ್ದರಿಂದ ಆಸ್ತಿಯಲ್ಲಿ ಸಮಾನ ಪಾಲು ಕೇಳುತ್ತಿದ್ದೇನೆ ಎಂದು ಶರ್ಮಿಳಾ ಹೇಳಿದರು.

"ಸರಸ್ವತಿ ಪವರ್ ಅಂಡ್ ಇಂಡಸ್ಟ್ರೀಸ್​ನ ಷೇರುಗಳ ವರ್ಗಾವಣೆಗೂ ಜಾಮೀನು ರದ್ದತಿಗೂ ಯಾವುದೇ ಸಂಬಂಧವಿಲ್ಲ. ಸರಸ್ವತಿ ಪವರ್ ಅಂಡ್ ಇಂಡಸ್ಟ್ರೀಸ್​ನ ಷೇರುಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿಲ್ಲ. ಕಂಪನಿಯ 32 ಕೋಟಿ ರೂ. ಮೌಲ್ಯದ ಭೂಮಿಯನ್ನು ಮಾತ್ರ ಅದು ಮುಟ್ಟುಗೋಲು ಹಾಕಿಕೊಂಡಿದೆ" ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಅವರ ಸೋಲಿಗೆ ತಾನೇ ಕಾರಣ ಎಂದು ಜಗನ್ ಮತ್ತು ಅವರ ಬೆಂಬಲಿಗರು ಭಾವಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾನು ಸಹೋದರ ಜಗನ್, ಅವರ ಪತ್ನಿ ಭಾರತಿ ಮತ್ತು ಕಡಪ ಸಂಸದ ಮತ್ತು ಸೋದರಸಂಬಂಧಿ ವೈಎಸ್ ಅವಿನಾಶ್ ರೆಡ್ಡಿ ಅವರನ್ನು ಎಂದಿಗೂ ಟೀಕಿಸಬಾರದು ಎಂಬ ಷರತ್ತಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವರು ಬಯಸಿದ್ದರು ಎಂದು ಶರ್ಮಿಳಾ ಹೇಳಿದರು. ಆದರೆ, ತಾನು ಎಪಿಸಿಸಿ ಮುಖ್ಯಸ್ಥೆಯಾಗಿರುವುದರಿಂದ ಮತ್ತು ರಾಜಕೀಯ ಪಕ್ಷದ ನಾಯಕಿಯಾಗಿರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಷರತ್ತುಗಳಿಗೆ ಒಪ್ಪದ ಕಾರಣದಿಂದ ಸಹೋದರನೊಂದಿಗಿನ ಒಪ್ಪಂದವು ಫಲಪ್ರದವಾಗಲಿಲ್ಲ ಮತ್ತು ತರುವಾಯ ಜಗನ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದರು ಎಂದು ಶರ್ಮಿಳಾ ಆರೋಪಿಸಿದರು.

ಇದನ್ನೂ ಓದಿ: ನ್ಯಾಯಾಂಗ ಕಲಾಪ ನಡೆಸಿದ ಹೈದರಾಬಾದ್​ ಪೊಲೀಸ್ ಆಯುಕ್ತ: ಗಲಭೆಕೋರರಿಗೆ ಖಡಕ್ ವಾರ್ನಿಂಗ್

ABOUT THE AUTHOR

...view details