ಶ್ರೀನಗರ:ಕಣಿವೆ ನಾಡು ಕಾಶ್ಮೀರದಲ್ಲಿ ಮಳೆಯ ನಡುವೆ ವ್ಯಾಪಕ ಹಿಮಪಾತ ಆಗುತ್ತಿರುವುದರಿಂದ ಶ್ರೀನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದಿಂದ ಭಾರೀ ಹಿಮಪಾತ ಕಂಡುಬರುತ್ತಿದ್ದು, ಕಣಿವೆನಾಡು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವರಿಸಿದೆ. ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಎಷ್ಟೋ ಪ್ರವಾಸಿಗರ ವಾಹನಗಳು ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿವೆ. ಅವುಗಳನ್ನು ತೆರವುಗೊಳಿಸಲಾಗುತ್ತಿದೆ.
ಇನ್ನು ನಿರಂತರ ಹಿಮಪಾತ ಮತ್ತು ಅತ್ಯಂತ ಕಡಿಮೆ ಗೋಚರತೆಯಿಂದಾಗಿ, ಶೇಖ್ ಉಲ್-ಆಲಂ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶುಕ್ರವಾರದಿಂದ ಪ್ರತಿಕೂಲ ಹವಾಮಾನವು ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರದ ಮೇಲೆ ಪರಿಣಾಮ ಬೀರಿದೆ. ಕಡಿಮೆ ಗೋಚರತೆ ಮತ್ತು ರನ್‌ವೇಯಲ್ಲಿ ಹಿಮದ ಶೇಖರಣೆಗೆ ಆಗುತ್ತಿರುವುದರಿಂದ ಹಾಗೂ ಕೆಟ್ಟ ಹವಾಮಾನದಿಂದಾಗಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರೈಲ್ವೆ ಹಳಿಯಲ್ಲಿ ಭಾರೀ ಹಿಮದ ಶೇಖರಣೆಯಾಗಿದ್ದು, ಅದರ ತೆರವು ಬಳಿಕ ರೈಲು ಸೇವೆ ಪುನರಾರಂಭಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.