ನವದೆಹಲಿ: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭಾರತ ಮಂಗಳವಾರ ಪ್ರಕಟಿಸಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾರಿಗೆ ಮರಣ ದಂಡನೆ ವಿಧಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಯೆಮನ್ನಲ್ಲಿ ನಿಮಿಷಾ ಪ್ರಿಯಾ ಅವರಿಗೆ ಶಿಕ್ಷೆ ವಿಧಿಸಿರುವ ಬಗ್ಗೆ ತಿಳಿದು ಬಂದಿದೆ. ಶ್ರೀಮತಿ ಪ್ರಿಯಾ ಅವರ ಕುಟುಂಬವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯ ನೀಡುತ್ತಿದೆ" ಎಂದು ತಿಳಿಸಿದರು.
ಮರಣದಂಡನೆ ಅಂಗೀಕರಿಸಿದ ಯೆಮೆನ್ ಅಧ್ಯಕ್ಷ:ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ.
ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ಅವರ ತಾಯಿ ಪ್ರೇಮಾ ಕುಮಾರಿ (57) ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಯೆಮೆನ್ ಮೂಲದ ಎನ್ಆರ್ಐ ಸಾಮಾಜಿಕ ಕಾರ್ಯಕರ್ತರ ಸಂಘಟನೆಯಾದ ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್ ಸಹಾಯದಿಂದ ಕೊಲೆಗೀಡಾದವರ ಕುಟುಂಬಕ್ಕೆ ದಿಯಾ (ರಕ್ತದ ಹಣ) ಮೊತ್ತ ಪಾವತಿಸುವ ಬಗ್ಗೆ ಮಾತುಕತೆ ನಡೆಸಲು ಅವರು ಯೆಮನ್ ರಾಜಧಾನಿ ಸನಾಗೆ ಪ್ರಯಾಣಿಸಿದ್ದರು.