ನವದೆಹಲಿ:ನಮ್ಮ ದೇಶವು ಅಧಿಕೃತ ಭಾಷೆಯಾಗಿ ಯಾವುದನ್ನೂ ಘೋಷಿಸಿಲ್ಲ. ಇಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶವಿದೆ. ಪಾಶ್ಚಾತ್ಯರ ಇಂಗ್ಲಿಷ್ ನಮಗೆ ಹೊಸದಾದರೂ, ಅದು ಆಡಳಿತ ಭಾಷೆಯಾಗಿ ಗುರುತಿಸಿಕೊಂಡಿದೆ. ದೇಶದ ಜನರು ಆಂಗ್ಲ ಭಾಷೆಯನ್ನು ಎಷ್ಟು ಬಲ್ಲರು ಎಂಬುದನ್ನು ಖಾಸಗಿ ಸಂಸ್ಥೆಯೊಂದು ಅಧ್ಯಯನ ನಡೆಸಿದ್ದು, ಅಚ್ಚರಿಯ ಸಂಗತಿ ಬಯಲಾಗಿದೆ.
ಭಾರತದಲ್ಲಿ ಆಂಗ್ಲ ಭಾಷೆಯನ್ನು ಮಾತನಾಡುವ ರಾಜ್ಯಗಳೇ ಇಲ್ಲ. ಆದರೆ, ಆಶ್ಚರ್ಯಕರ ಮತ್ತು ಪ್ರಶಂಸದಾಯಕ ಸಂಗತಿಯೆಂದರೆ ವಿಶ್ವದಲ್ಲಿಯೇ ಅತಿ ನಿರರ್ಗಳವಾಗಿ ಇಂಗ್ಲಿಷ್ ಭಾಷೆಯನ್ನು ದೆಹಲಿಯ ಜನರು ಮಾತನಾಡುತ್ತಾರಂತೆ. ಇಂಥದ್ದೊಂದು ಮಾಹಿತಿ ಪಿಯರ್ಸನ್ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ.
ಗ್ಲೋಬಲ್ ಇಂಗ್ಲಿಷ್ ಪ್ರೊಫಿಷಿಯನ್ಸಿ ರಿಪೋರ್ಟ್- 2024 ಎಂಬ ವರದಿಯನ್ನು ಪಿಯರ್ಸನ್ ಸಂಸ್ಥೆಯು ಸೋಮವಾರ ಬಿಡುಗಡೆ ಮಾಡಿದೆ. ಅದರಲ್ಲಿ ಆಂಗ್ಲ ಭಾಷೆಯನ್ನು ಉತ್ತಮವಾಗಿ ಮಾತನಾಡುವ ಮತ್ತು ಬರೆಯುವ ದೇಶಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಭಾರತ, ಜಪಾನ್, ಈಜಿಪ್ಟ್, ಕೊಲಂಬಿಯಾ, ಯುರೋಪ್ ರಾಷ್ಟ್ರಗಳ ಜನರು ಆಂಗ್ಲ ಭಾಷೆಯಲ್ಲಿ ನೈಪುಣ್ಯತೆ ಹೊಂದಿದ್ದಾಗಿ ಉಲ್ಲೇಖಿಸಿದೆ.
ವಿಶ್ವದಲ್ಲೇ ದಿಲ್ಲಿ ಅತ್ಯುತ್ತಮ ಇಂಗ್ಲಿಷ್ ಮಾತನಾಡುವ ರಾಜ್ಯ :ಪಿಯರ್ಸನ್ ಸಂಸ್ಥೆಯು ಭಾಷಾ ಕೌಶಲ್ಯ ಪತ್ತೆಗೆ ವರ್ಸೆಂಟ್ ಎಂಬ ಟೂಲ್ ಬಳಸಿ, ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸುಮಾರು 7.50 ಲಕ್ಷ ಇಂಗ್ಲಿಷ್ ಕೌಶಲ್ಯ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ ಅತ್ಯುತ್ತಮವಾಗಿ ಆಂಗ್ಲ ಪದಗಳನ್ನು ಬಳಸುವಲ್ಲಿ ದೆಹಲಿಯ ಜನರು ದೇಶ ಮತ್ತು ವಿಶ್ವದಲ್ಲಿಯೇ ಮುಂದಿದ್ದಾರೆ. ಅಸ್ಖಲಿತ (ತಪ್ಪಿಲ್ಲದೆ) ಮತ್ತು ಸ್ಪಷ್ಟವಾಗಿ ಉಚ್ಚರಿಸುವಲ್ಲಿ ರಾಷ್ಟ್ರಗಳಲ್ಲಿ ಭಾರತಕ್ಕೆ 57 ಅಂಕ ಸಿಕ್ಕಿದ್ದರೆ, ಉಳಿದ ರಾಷ್ಟ್ರಗಳು 54 ಅಂಕ ಪಡೆದಿವೆ. ದೇಶವಾರು ಲೆಕ್ಕಾಚಾರದಲ್ಲಿ ದೆಹಲಿ ನಂಬರ್ 1 ಸ್ಥಾನದಲ್ಲಿದ್ದರೆ, ನಂತರದಲ್ಲಿ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳು ಇವೆ.