ನವದೆಹಲಿ:ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆದಿರುವ ಭಾರತ, ಏಷ್ಯಾ ಖಂಡದಲ್ಲಿ ಮೂರನೇ 'ಪವರ್ಫುಲ್' ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಂತ್ರಿಕತೆಗೆ ಹೆಸರಾಗಿರುವ ಪುಟ್ಟ ರಾಷ್ಟ್ರ ಜಪಾನ್ ಅನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ.
ಬುಧವಾರ ಬಿಡುಗಡೆಯಾಗಿರುವ ಏಷ್ಯಾದ ಶಕ್ತಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನವನ್ನು ಹೊಂದಿದ್ದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತವು ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ ಎಂದಿದೆ.
ಇದು ಭಾರತದ ಕ್ರಿಯಾತ್ಮಕ ಬೆಳವಣಿಗೆ, ಯುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಆರ್ಥಿಕತೆಯು ಏಷ್ಯಾದಲ್ಲಿ ಪ್ರಮುಖ ಶಕ್ತಿ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದೆ ಎಂದು ಸಚಿವಾಲಯವು ತಿಳಿಸಿದೆ. ದೇಶದ ಭೌಗೋಳಿಕ ರಾಜಕೀಯ ಸ್ಥಾನಮಾನವನ್ನೂ ಪ್ರತಿಬಿಂಬಿಸುತ್ತದೆ ಎಂದಿದೆ.
ಜಪಾನ್ ಹಿಂದಿಕ್ಕಿದ ಭಾರತ:ಲೋವಿ ಸಂಸ್ಥೆಯು ಏಷ್ಯಾ ಪವರ್ ಇಂಡೆಕ್ಸ್ 2024 ರ ಸಾಲಿನ ವರದಿಯನ್ನು ಬಿಡುಗಡೆ ಮಾಡಿದ್ದು, ಏಷ್ಯಾ-ಪೆಸಿಫಿಕ್ನ ಪವರ್ಫುಲ್ ಡೈನಾಮಿಕ್ಸ್ ರಾಷ್ಟ್ರಗಳನ್ನು ಇದು ಗುರುತಿಸಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದ 27 ದೇಶಗಳನ್ನು ಮೌಲ್ಯಮಾಪನ ಮಾಡಿದ್ದು, ಭಾರತಕ್ಕೆ ಮೂರನೇ ಶಕ್ತಿಯುತ ರಾಷ್ಟ್ರ ಎಂಬ ಮನ್ನಣೆ ನೀಡಿದೆ. ವಿಶೇಷವೆಂದರೆ, ತಾಂತ್ರಿಕವಾಗಿ ಮುಂದಿರುವ ಜಪಾನ್, ಭಾರತಕ್ಕಿಂತ ಹಿಂದೆ ಬಿದ್ದಿದೆ ಎಂದು ವರದಿ ತಿಳಿಸಿದೆ.