ನವದೆಹಲಿ: ಸೌರ ಶಕ್ತಿಯಲ್ಲಿ ಭಾರತ ಕ್ಷಿಪ್ರಗತಿಯ ಸಾಧನೆ ಮಾಡಿದೆ. 2023ರಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
2023ರಲ್ಲಿ ಜಾಗತಿಕ ವಿದ್ಯುತ್ ವಲಯದಲ್ಲಿ ದಾಖಲೆಯ ಶೇ.5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಈ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಕಳೆದ ವರ್ಷ ಭಾರತ ಸೌರಶಕ್ತಿಯಿಂದ ಶೇ.5.8ರಷ್ಟು ವಿದ್ಯುತ್ ಉತ್ಪಾದಿಸಿದೆ ಎಂದು ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್ (Ember) ವರದಿ ಹೇಳಿದೆ.
ಪವನ ಮತ್ತು ಸೌರಶಕ್ತಿಯಲ್ಲಿನ ಬಲವಾದ ಬೆಳವಣಿಗೆಯು ಜಾಗತಿಕ ವಿದ್ಯುಚ್ಛಕ್ತಿ ಮಿಶ್ರಣದಲ್ಲಿ ನವೀಕರಿಸಬಹುದಾದ ಪಾಲನ್ನು ಶೇ.30ರಷ್ಟು ಮತ್ತು ಒಟ್ಟು ಶುದ್ಧ ಉತ್ಪಾದನೆ (ಪರಮಾಣು ಒಳಗೊಂಡಂತೆ) ಸುಮಾರು ಶೇ.40ಕ್ಕೆ ಏರಿಕೆಯಾಗಿದೆ ಎಂಬರ್‌ನ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ ವರದಿ ತಿಳಿಸಿದೆ.
ಇದರ ಪರಿಣಾಮವಾಗಿ ವಿಶ್ವದ ವಿದ್ಯುಚ್ಛಕ್ತಿಯ ಇಂಗಾಲದ ತೀವ್ರತೆಯು ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2007ರಲ್ಲಿ ವಿದ್ಯುಚ್ಛಕ್ತಿಯ ಇಂಗಾಲವು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇದಕ್ಕೆ ಹೋಲಿಸಿದರೆ ಈಗ ಶೇ.12ರಷ್ಟು ಇದರ ಪ್ರಮಾಣ ಕಡಿಮೆಯಾಗಿದೆ. ನವೀಕರಿಸಬಹುದಾದ ಉತ್ಪಾದನೆಯ ಬೆಳವಣಿಗೆಯು 2023ರಲ್ಲಿ ಇನ್ನೂ ಹೆಚ್ಚಾಗಬಹುದಿತ್ತು. ಆದರೆ, ಚೀನಾ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಬರದಿಂದಾಗಿ ಜಲವಿದ್ಯುತ್ ಉತ್ಪಾದನೆಯು ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಎಂಬರ್‌ನ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಆದಿತ್ಯ ಲೊಲ್ಲಾ ಮಾತನಾಡಿ, ''ಶುದ್ಧ ವಿದ್ಯುತ್ ಹೆಚ್ಚಿಸಬೇಕಿರುವುದು ವಿದ್ಯುತ್ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮಾತ್ರವಲ್ಲದೇ, ಏರುತ್ತಿರುವ ವಿದ್ಯುದ್ದೀಕರಣದ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಮತ್ತು ಇಂಗಾಲದ ಹೊರಸೂಸುವಿಕೆಯಿಂದ ಆಗುತ್ತಿರುವ ಆರ್ಥಿಕ ಹೊರೆಯನ್ನು ದೂರ ಸರಿಸಲು ಅವಶ್ಯಕವಾಗಿದೆ. ಅಲ್ಲದೇ, ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲೂ ನಿರ್ಣಾಯಕ'' ಎಂದು ತಿಳಿಸಿದ್ದಾರೆ.
ಸೋಲಾರ್ ಸತತ 19ನೇ ವರ್ಷವೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಮೂಲವಾಗಿದೆ. ವಿಶ್ವಾದ್ಯಂತ 2023ರಲ್ಲಿ ಕಲ್ಲಿದ್ದಲಿಗಿಂತ ಎರಡು ಪಟ್ಟು ಹೆಚ್ಚು ಹೊಸ ವಿದ್ಯುತ್ ಸೌರ ಶಕ್ತಿಯಿಂದ ಉತ್ಪಾದನೆಯಾಗಿದೆ. 2023ರಲ್ಲಿ ಸೌರ ಉತ್ಪಾದನೆಯಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಹೆಚ್ಚಳವನ್ನು ಕಂಡಿದೆ. ಚೀನಾ (+156 ಟೆರಾವ್ಯಾಟ್ ಗಂಟೆ-TWh), ಅಮೆರಿಕ (+33 TWh) ಮತ್ತು ಬ್ರೆಜಿಲ್ (+22 TWh) ನಂತರದಲ್ಲಿ ಭಾರತ (+18 TWh) ಇದೆ. ಒಟ್ಟಾರೆ, ಈ ಅಗ್ರ ನಾಲ್ಕು ಸೌರ ಬೆಳವಣಿಗೆಯ ರಾಷ್ಟ್ರಗಳು 2023ರಲ್ಲಿ ಶೇ.75ರಷ್ಟು ಬೆಳವಣಿಗೆ ಹೊಂದಿವೆ.
2023ರಲ್ಲಿ ಜಾಗತಿಕ ಸೌರ ಉತ್ಪಾದನೆಯು 2015ಕ್ಕಿಂತ ಆರು ಪಟ್ಟು ಹೆಚ್ಚಳವಾಗಿದೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಸೌರ ಕೊಡುಗೆಯು 2015ರಲ್ಲಿದ್ದ ಶೇ.0.5ರಿಂದ 2023ಕ್ಕೆ ಶೇ.5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್ ವರದಿ ಹೇಳಿದೆ. ಇದೇ ವೇಳೆ, ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿಯ ನೆಟ್ ಝೀರೋ ಎಮಿಷನ್ಸ್ ಪ್ರಕಾರ, ಸೌರಶಕ್ತಿಯು 2030ರ ವೇಳೆಗೆ ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ.22ಕ್ಕೆ ಏರಿಕೆಯಾಗುಬಹುದು. ವಿದ್ಯುಚ್ಛಕ್ತಿ ಉತ್ಪಾದನೆಯು ಭಾರತದ ವಾರ್ಷಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ಪಾಲನ್ನು ಹೊಂದಿದ್ದು, ದೇಶವು ತನ್ನ ಅಭಿವೃದ್ಧಿ ಮತ್ತು ಹವಾಮಾನ ಗುರಿಗಳನ್ನು ಪೂರೈಸಲು ಶುದ್ಧ ಉತ್ಪಾದನಾ ಮೂಲಗಳಿಗೆ ಪರಿವರ್ತನೆಯನ್ನು ವೇಗಗೊಳಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಕಾಪ್28 ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳು ನಾಯಕರು, 2030ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಭಾರತವೂ ಒಂದಾಗಿದೆ.
ಇದನ್ನೂ ಓದಿ:ಪಾವಗಡದಲ್ಲಿ ಮತ್ತೊಂದು ಬೃಹತ್ ಸೋಲಾರ್ ಪಾರ್ಕ್ ಸ್ಥಾಪನೆ: ರೈತರಿಗೂ ಸಿಗಲಿದೆ ಪಾಲುದಾರಿಕೆ