ಬೇತುಲ್(ಗೋವಾ):ಪ್ರಾಥಮಿಕ ಇಂಧನ ಮಿಶ್ರಣದಲ್ಲಿ ಅನಿಲವನ್ನು ಉತ್ತೇಜಿಸುವ ಕ್ರಮಕ್ಕೆ ದೇಶವು ಹೆಜ್ಜೆ ಇಟ್ಟು, ಮುಂದಿನ ಐದಾರು ವರ್ಷಗಳಲ್ಲಿ 67 ಬಿಲಿಯನ್ ಡಾಲರ್ ಎಂದರೆ, 5.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಎದುರು ನೋಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಗೋವಾದಲ್ಲಿ ಇಂದು ಹಮ್ಮಿಕೊಂಡಿದ್ದ ಭಾರತದ ಇಂಧನ ಸಪ್ತಾಹದ 2ನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕ ಬೆಳವಣಿಗೆಯು ಶೇ.7.5ಕ್ಕಿಂತ ಅಧಿಕ ಇದೆ. ಶೀಘ್ರದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ದೇಶ ಹೊರಹೊಮ್ಮಲಿದೆ ಎಂದರು. ಇದೇ ವೇಳೆ, ದೇಶದ ಇಂಧನ ವಲಯದ ಬೆಳವಣಿಗೆಯಲ್ಲಿ ಭಾಗಿದಾರರಾಗುವಂತೆ ಜಗತ್ತಿನ ಹೂಡಿಕೆದಾರರಿಗೆ ಕರೆ ನೀಡಿದ ಅವರು, ಈ ವಲಯದಲ್ಲಿ ದೇಶದ ಸಾಮರ್ಥ್ಯ 254 ಎಂಎಂಟಿಪಿಎನಿಂದ (ವಾರ್ಷಿಕ ಮಿಲಿಯನ್ ಮೆಟ್ರಿಕ್ ಟನ್) 2030ರ ವೇಳೆಗೆ 450 ಎಂಎಂಟಿಪಿಎಗೆ ಏರಿಕೆಯಾಗಲಿದೆ ಎಂದರು.
ಜೊತೆಗೆ, ಮೂಲಭೂತ ಸೌಕರ್ಯಕ್ಕೆ ತಮ್ಮ ಸರ್ಕಾರ ನೀಡುತ್ತಿರುವ ಪ್ರಮುಖ್ಯತೆ ಬಗ್ಗೆ ಉಲ್ಲೇಖಿಸಿದ ಮೋದಿ, 2025ನೇ ಆರ್ಥಿಕ ವರ್ಷದಲ್ಲಿ 11 ಲಕ್ಷ ಕೋಟಿ ರೂ. ಬಜೆಟ್ ಅನ್ನು ಮೂಲಭೂತ ಸೌಕರ್ಯಕ್ಕೆ ಒದಗಿಸಲು ನಿರ್ಣಯಿಸಲಾಗಿದೆ. ಇದರಲ್ಲಿ ಅಧಿಕ ಪಾಲು ಇಂಧನ ವಲಯಕ್ಕೆ ಇರಲಿದೆ. ರೈಲ್ವೆ, ರಸ್ತೆ, ಜಲ, ವಾಯು ಮಾರ್ಗ/ವಸತಿ ಸೇರಿ ಯಾವುದಕ್ಕೆ ಇಂಧನ ಅಗತ್ಯವೋ, ಅಲ್ಲಿ ಇದು ಸಂಪತ್ತನ್ನು ಸೃಷ್ಟಿಸುತ್ತಿದೆ. ಈ ಮೂಲಕ ದೇಶವು ತನ್ನ ಶಕ್ತಿ ಸಾಮರ್ಥ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದು ವಿವರಿಸಿದರು.