ನವದೆಹಲಿ: ತನ್ನ ಬಂಧನವನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಬುಧವಾರ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಹೊಸ ಅಫಿಡವಿಟ್ ಸಲ್ಲಿಸಿದೆ. ಇದರಲ್ಲಿ, ಕೇಜ್ರಿವಾಲ್ ಅವರ ಬಂಧನವನ್ನು ಸಮರ್ಥಿಸಿಕೊಂಡಿದ್ದು, ಅವರ ನಡುವಳಿಕೆಯಿಂದಲೇ ಬಂಧನದ ಅಗತ್ಯತೆ ತಿಳಿದು ಬಂದಿದೆ ಎಂದು ತಿಳಿಸಿದೆ.
"ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕಾನೂನು ಬದ್ಧವಾಗಿದೆ. ಪ್ರಕರಣದ ವಿಚಾರಣೆಗಾಗಿ ನಾವು ಕೇಜ್ರಿವಾಲ್ ಅವರಿಗೆ 9 ಬಾರಿ ಸಮನ್ಸ್ ಜಾರಿ ಮಾಡಿದ್ದೆವು, ಆದರೂ ಅವರು ಒಂದು ಬಾರಿಯೂ ವಿಚಾರಣೆಗೆ ಹಾಜರಾಗಲಿಲ್ಲ. ಕೇಜ್ರಿವಾಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ. ಯಾವುದೇ ದುರುದ್ದೇಶದಿಂದ ಅವರನ್ನು ಬಂಧಿಸಲಾಗಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಇಂತಹ ಪರಿಸ್ಥಿತಿಯಲ್ಲಿ ಒಂದು ಪಕ್ಷದ ನಾಯಕನನ್ನು ಇತರ ಅಪರಾಧಿಗಳಿಗಿಂತ ಭಿನ್ನವಾಗಿ ನಡೆಸಿಕೊಳ್ಳುವುದು ಸಂವಿಧಾನದ ಅಡಿಯಲ್ಲಿ ಇಲ್ಲ ಎಂದು ಕೇಂದ್ರ ತನಿಖಾ ಸಂಸ್ಥೆ ಅಫಿಡವಿಟ್ನಲ್ಲಿ ತಿಳಿಸಿದೆ".
"ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯು ಮಾನ್ಯವಲ್ಲ, ಅದನ್ನು ವಜಾಗೊಳಿಸಬೇಕು ಎಂದು ಇಡಿ ಹೇಳಿದೆ. ಅಲ್ಲದೇ ಕೇಜ್ರಿವಾಲ್ ಅವರನ್ನು ಬಂಧಿಸಲು ಬೇಕಾಗಿರುವ ಸೂಕ್ತ ಆಧಾರಗಳು ಇದ್ದು, ವಿವಿಧ ಮೂರು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ" ಎಂದೂ ತನ್ನ ಅಫಿಡವಿಡ್ನಲ್ಲಿ ಇಡಿ ತಿಳಿಸಿದೆ.