ಜೈಪುರ:ರಾಜಸ್ಥಾನದಲ್ಲಿ ಬರುವ ಏಪ್ರಿಲ್ 19 ಮತ್ತು 26ರಂದು 2024ರ ಲೋಕಸಭಾ ಚುನಾವಣೆಗಾಗಿ ಮತದಾನ ನಡೆಯಲಿದೆ. ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಇತರ ಗುರುತಿನ ಪುರಾವೆ ತೋರಿಸಿ ಮತದಾನ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಜೈಪುರ ಜಿಲ್ಲಾ ಚುನಾವಣಾ ಅಧಿಕಾರಿ ಪ್ರಕಾಶ್ ರಾಜ್ ಪುರೋಹಿತ್, "ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ಮತದಾನದ ದಿನದಂದು ಮತದಾರರು ಯಾವುದೇ ತೊಂದರೆಯಿಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು. ಫೋಟೋ ಗುರುತಿನ ಚೀಟಿ ಇಲ್ಲದ ಮತದಾರರು ಇತರ 12 ಪರ್ಯಾಯ ಫೋಟೋ ಗುರುತಿನ ದಾಖಲೆಗಳನ್ನು ತೋರಿಸುವ ಮೂಲಕ ಮತ ಚಲಾಯಿಸಬಹುದು" ಎಂದು ಹೇಳಿದರು.
ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೆ ಈ ದಾಖಲೆಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು: ಆಧಾರ್ ಕಾರ್ಡ್, ಎಂಎನ್ಆರ್ಇಜಿಎ ಜಾಬ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಫೋಟೋದೊಂದಿಗೆ ಪಿಂಚಣಿ ದಾಖಲೆ, ಕೇಂದ್ರ / ರಾಜ್ಯ ಸರ್ಕಾರ / ಪಿಎಸ್ಯು / ಸಾರ್ವಜನಿಕ ಲಿಮಿಟೆಡ್ ಕಂಪನಿಗಳು ನೌಕರರಿಗೆ ನೀಡಿದ ಫೋಟೋ ಹೊಂದಿರುವ ಸೇವಾ ಗುರುತಿನ ಚೀಟಿ, ಬ್ಯಾಂಕುಗಳು / ಅಂಚೆ ಕಚೇರಿಗಳು ನೀಡಿದ ಭಾವಚಿತ್ರವಿರುವ ಪಾಸ್ ಬುಕ್ಗಳು, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಡಿ ಆರ್ಜಿಐ ನೀಡಿದ ಸ್ಮಾರ್ಟ್ ಕಾರ್ಡ್ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ಗಳು, ಸಂಸದರು / ಶಾಸಕರು / ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು ಮತ್ತು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯವು ಅಂಗವಿಕಲ ವ್ಯಕ್ತಿಗಳಿಗೆ ನೀಡಿದ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಗಳನ್ನು ತೋರಿಸಿ ಮತ ಚಲಾಯಿಸಬಹುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಉಪ ನಿರ್ದೇಶಕ ರಿತೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
"ಮತದಾನದ ಸಮಯದಲ್ಲಿ ಮತದಾರರು ಅನೇಕ ಬಾರಿ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚುನಾವಣಾ ಫೋಟೋ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ ಮತದಾರರು ತಮ್ಮ ಮತದಾನದ ಹಕ್ಕನ್ನು ಬಳಸಲು ಸಾಧ್ಯವಾಗುವುದಿಲ್ಲ. ಮತದಾರರ ಬಳಿ ಚುನಾವಣಾ ಫೋಟೋ ಗುರುತಿನ ಚೀಟಿ ಇಲ್ಲದಿದ್ದರೆ ಇತರ ಫೋಟೋ ಗುರುತಿನ ದಾಖಲೆಗಳನ್ನು ತೋರಿಸುವ ಮೂಲಕ ಮತ ಚಲಾಯಿಸುವ ಅವಕಾಶವನ್ನು ಭಾರತದ ಚುನಾವಣಾ ಆಯೋಗ ಕಲ್ಪಿಸಿದೆ. ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ವೋಟರ್ ಐಡಿ ಕಾರ್ಡ್ ಸಿಕ್ಕಿರುವುದಿಲ್ಲ. ಅಂಥವರಿಗೆ ಇದು ವಿಶೇಷವಾಗಿ ಅನುಕೂಲಕರವಾಗಿದೆ" ಎಂದು ರಿತೇಶ್ ಕುಮಾರ್ ಶರ್ಮಾ ಹೇಳಿದರು.