ಪಾಲ್ಘಾರ್: ಸಿಂಧುದುರ್ಗ್ನಲ್ಲಿನ ಶಿವಾಜಿ ಪ್ರತಿಮೆ ಕುಸಿತ ಘಟನೆಯಿಂದಾಗಿ ಘಾಸಿಗೊಂಡ ಮಹಾರಾಷ್ಟ್ರ ಜನರಿಗೆ ನಾನು ತಲೆಬಾಗಿ ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘಾರ್ನ ಮಲ್ವಾನ್ನಲ್ಲಿ 76 ಸಾವಿರ ಕೋಟಿ ವೆಚ್ಚದ ದೇಶದ ಅತಿದೊಡ್ಡ ವಧವನ್ ಬಂದರು ಯೋಜನೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಾನು ಇಲ್ಲಿಗೆ ಬಂದಿಳಿದ ತಕ್ಷಣ ಮೊದಲಿಗೆ ಶಿವಾಜಿ ಪ್ರತಿಮೆ ಕುಸಿತ ಸಂಬಂಧ ಕ್ಷಮೆ ಕೇಳುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ತಮ್ಮ ದೇವರು ಎಂದು ನಂಬಿರುವವರಿಗೆ ಘಟನೆಯಿಂದ ತೀವ್ರ ನೋವುಂಟಾಗಿದೆ. ಅವರಿಗೆ ನಾನು ತಲೆಬಾಗಿ ಕ್ಷಮೆ ಕೋರುತ್ತೇನೆ. ನಮ್ಮ ಮೌಲ್ಯಗಳು ಭಿನ್ನವಾಗಿವೆ. ಆದರೆ, ನಮಗೆ ನಮ್ಮ ದೇವರಿಗಿಂತ ಯಾವುದು ದೊಡ್ಡದಲ್ಲ ಎಂದು ತಿಳಿಸಿದರು.
ಛತ್ರಪತಿ ಶಿವಾಜಿ ಮಹಾರಾಜ್ ಕೇವಲ ಹೆಸರಲ್ಲ. ಶಿವಾಜಿ, ವೀರ ಸಾವರ್ಕರ್ ಈ ನೆಲದ ಮಕ್ಕಳು. ಭಾರತ ಮಾತೆಯ ಶ್ರೇಷ್ಠ ಮಗನನ್ನು ಕೆಲವರು ಅವಮಾನಿಸುತ್ತಾರೆ. ಆದರೆ, ಅವರು ಇದಕ್ಕಾಗಿ ಕ್ಷಮೆಯಾಚಿಸಲು ಸಿದ್ಧರಿರುವುದಿಲ್ಲ ಎಂದರು.
ಕಳೆದ ಎಂಟು ತಿಂಗಳ ಹಿಂದೆ ಸಿಂಧುದುರ್ಗದ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಆಗಸ್ಟ್ 26ರಂದು ಕುಸಿದಿತ್ತು. ಈ ಘಟನೆ ಬಳಿಕ ವಿಪಕ್ಷಗಳು ಪ್ರಧಾನಿಯನ್ನು ಗುರಿಯಾಗಿಸಿ ಟೀಕೆ ನಡೆಸಿದ್ದವು. ನಮ್ಮ ನಾಡಿನ ಮಗನಿಗೆ ಆದ ಅವಮಾನವಿದು ಎಂದು ಪ್ರತಿಪಕ್ಷಗಳು ಟೀಕಿಸಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡ ಈ ಸಂಬಂಧ ನಾಡಿನ ಜನರ ಕ್ಷಮೆಯಾಚಿಸಿದರು. ಪ್ರತಿಮೆ ಕುಸಿತ ಪ್ರಕರಣದ ತನಿಖೆಗಾಗಿ ಎರಡು ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಸರ್ಕಾರವೂ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಪುನರ್ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಸುವರ್ಣಾಕ್ಷರದ ದಿನ: ಇಂದು ಭಾರತ, ಮಹಾರಾಷ್ಟ್ರ ಮತ್ತು ಪಾಲ್ಘಾರನ ಇತಿಹಾಸದಲ್ಲಿ ಸುವರ್ಣ ದಿನ. ಈ ಯೋಜನೆ ಕೇವಲ ಪಾಲ್ಘಾರ್ ಅಥವಾ ಮಹಾರಾಷ್ಟ್ರಕ್ಕೆ ಪ್ರಯೋಜನ ನೀಡುವುದಿಲ್ಲ. ಇದರಿಂದ ಇಡೀ ದೇಶಕ್ಕೆ ಲಾಭವಿದೆ. ಇಂದಿನ ದಿನ ಭಾರತದ ಅಭಿವೃದ್ಧಿಗೆ ಮೈಲಿಗಲ್ಲಾಗಲಿದೆ. ಮಹಾರಾಷ್ಟ್ರದ ಅಭಿವೃದ್ಧಿ ಭಾರತದ ಅಭಿವೃದ್ಧಿಗೆ ಮುಖ್ಯವಾಗಿದೆ ಎಂದರು.
ಇದನ್ನೂ ಓದಿ: ಪರಿಸರವಾದಿಗಳ ವಿರೋಧದ ನಡುವೆ ಇಂದು ವಧವನ್ ಬಂದರು ಯೋಜನೆಗೆ ಪ್ರಧಾನಿ ಭೂಮಿ ಪೂಜೆ