ಶ್ರೀಶೈಲಂ(ಆಂಧ್ರಪ್ರದೇಶ): ವಿಜಯವಾಡ ಮತ್ತು ಶ್ರೀಶೈಲಂ ನಡುವಿನ ಪ್ರಸ್ತಾವಿತ ಸೀಪ್ಲೇನ್ (ಜಲ ವಿಮಾನ) ಸೇವೆಯ ಪ್ರಾಯೋಗಿಕ ಹಾರಾಟ (ಸೀಪ್ಲೇನ್ ಟ್ರಯಲ್ ರನ್) ಇಂದು ಯಶಸ್ವಿಯಾಗಿದೆ. ವಿಜಯವಾಡ ಪ್ರಕಾಶಂ ಬ್ಯಾರೇಜ್‌ನಿಂದ ಶ್ರೀಶೈಲಂಗೆ ಆಗಮಿಸಿದ ಸೀಪ್ಲೇನ್ ಅಲ್ಲಿದ್ದ ಜಲಾಶಯದ ನೀರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ನಂತರ ಪೊಲೀಸ್, ಪ್ರವಾಸೋದ್ಯಮ, ಎಸ್ಡಿಆರ್ಎಫ್ ಮತ್ತು ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲಿ ಶ್ರೀಶೈಲಂನಿಂದ ವಿಜಯವಾಡಕ್ಕೆ ಪ್ರಾಯೋಗಿಕ ಹಾರಾಟ ನಡೆಸಲಾಯಿತು.
ಸೀಪ್ಲೇನ್ ಮೂಲಕ ಚಂದ್ರಬಾಬು ನಾಯ್ಡು ಪ್ರವಾಸ: ಅತ್ಯಾಕರ್ಷಕ ಡ್ರೋನ್ ಶೋ ಆಯೋಜಿಸಿ ವಿಶ್ವದ ಗಮನ ಸೆಳೆದಿರುವ ಆಂಧ್ರಪ್ರದೇಶ ಸರ್ಕಾರ ಮತ್ತೊಂದು ಅದ್ಭುತ ಪ್ರಯೋಗಕ್ಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶನಿವಾರ ವಿಜಯವಾಡ ಮತ್ತು ಶ್ರೀಶೈಲಂ ನಡುವೆ ಸೀಪ್ಲೇನ್ ಮೂಲಕ ಪ್ರಯಾಣಿಸಲಿದ್ದಾರೆ. ವಿಜಯವಾಡ ಮತ್ತು ಶ್ರೀಶೈಲಂ ನಡುವೆ ಸೀ ಪ್ಲೇನ್ ಟ್ರಯಲ್ ರನ್ ಯಶಸ್ವಿಯಾದಲ್ಲಿ, ನಿಯಮಿತ ಸೇವೆಗಳು ಪ್ರಾರಂಭವಾಗಲಿದೆ.
ವಿಜಯವಾಡದಿಂದ ಶ್ರೀಶೈಲಕ್ಕೆ ಸೀಪ್ಲೇನ್: ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸಲು ವಿನೂತನ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿರುವ ಮುಖ್ಯಮಂತ್ರಿ ಚಂದ್ರಬಾಬು ಅವರು ಶನಿವಾರ ಸ್ವತಃ ಸೀಪ್ಲೇನ್‌ನಲ್ಲಿ ಪ್ರಯಾಣಿಸಲಿದ್ದಾರೆ. ಬೆಳಗ್ಗೆ ವಿಜಯವಾಡ ಪ್ರಕಾಶಂ ಬ್ಯಾರೇಜ್‌ನಿಂದ ಸೀ ಪ್ಲೇನ್ ಮೂಲಕ ಸಿಎಂ ಹೊರಟು ಮಧ್ಯಾಹ್ನ ಶ್ರೀಶೈಲಂ ತಲುಪಲಿದ್ದಾರೆ. ಅಲ್ಲಿನ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದ ಬಳಿಕ ಸೀ ಪ್ಲೇನ್ ಮೂಲಕ ವಿಜಯವಾಡಕ್ಕೆ ಹಿಂತಿರುಗುವರು.
ಸೀ ಪ್ಲೇನ್ ಪ್ರಯೋಗಿಕ ಹಾರಾಟ ಯಶಸ್ವಿ: ಶ್ರೀಶೈಲಂನ ಪಾತಾಳಗಂಗಾ ಅಕ್ಕಮಹಾದೇವಿ ಗುಹೆಗಳಿಗೆ ಹೋಗುವ ಜಲಮಾರ್ಗದಲ್ಲಿ ಸೀ ಪ್ಲೇನ್ ಲ್ಯಾಂಡಿಂಗ್ ಸೂಕ್ತ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ವಾಯುಮಾರ್ಗದಲ್ಲಿ ಬರುವ ವಿಮಾನ ನೀರಿನ ಮೇಲೆ ಇಳಿದು ಸುಮಾರು ಅರ್ಧ ಕಿಲೋಮೀಟರ್ ಕ್ರಮಿಸಿ ಜೆಟ್ಟಿ ಬಳಿ ನಿಲ್ಲುತ್ತದೆ. ಸೀಪ್ಲೇನ್ ಪ್ರಯಾಣದ ಮೂಲಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಸಿಗಲಿದೆ. ಶನಿವಾರ ಸಿಎಂ ಭೇಟಿ ಹಿನ್ನೆಲೆಯಲ್ಲಿ ವಿಜಯವಾಡ ಪ್ರಕಾಶಂ ಬ್ಯಾರೇಜ್ ಮತ್ತು ಶ್ರೀಶೈಲಂ ನಡುವಿನ ಸೀ ಪ್ಲೇನ್ ಪ್ರಾಯೋಗಿಕ ಸಂಚಾರ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದೆ.
ಇದನ್ನೂ ಓದಿ: ಅ.31ರಿಂದ ಬೆಂಗಳೂರು-ಕೊಲಂಬೊ ನಡುವೆ ಹಗಲು ವಿಮಾನಯಾನ ಆರಂಭ