ಸೆರೈಕೆಲಾ(ಜಾರ್ಖಂಡ್):ಹೌರಾ-ಮುಂಬೈ ನಡುವೆ ಸಂಚರಿಸುತ್ತಿದ್ದ ಮೇಲ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12810) ಹಳಿ ತಪ್ಪಿರುವ ಘಟನೆ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವನ್ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳು ಧಾವಿಸಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ.
ಚಕ್ರಧರಪುರ ವಿಭಾಗದ ಬಡಬಾಂಬೋ-ರಾಜಖಾರ್ಸಾವನ್ ರೈಲ್ವೆ ನಿಲ್ದಾಣದ ನಡುವಿನ ಪೊಟೊ ಬೇಡಾ ಗ್ರಾಮದ ಬಳಿ ಮುಂಜಾನೆ 4.30ರ ಸುಮಾರಿಗೆ ಅಪಘಾತ ಜರುಗಿದೆ. ರೈಲಿನ ನಾಲ್ಕು ಸಾಮಾನ್ಯ ಬೋಗಿಗಳನ್ನು ಹೊರತುಪಡಿಸಿ ಉಳಿದೆಲ್ಲ 18 ಬೋಗಿಗಳು ಹಳಿತಪ್ಪಿವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸೆರೈಕೆಲಾ-ಖಾರ್ಸಾವನ್ ಜಿಲ್ಲಾಧಿಕಾರಿ ರವಿಶಂಕರ್ ಶುಕ್ಲಾ ಸೇರಿದಂತೆ ಅನೇಕ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.