ವಾರಣಾಸಿ(ಉತ್ತರ ಪ್ರದೇಶ):ಜ್ಞಾನವಾಪಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರೆದಿದೆ. ಈ ಮಧ್ಯೆ ವಿವಾದಿತ ಸ್ಥಳದಲ್ಲಿ ವಾರಣಾಸಿ ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿದ ನಂತರ, ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ಸಂಕೀರ್ಣದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವ ಹಿಂದೂ ಪಕ್ಷಗಾರರ ಕಡೆಯವರು ಐದು ಆರತಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ನೆಲಮಾಳಿಗೆಯಲ್ಲಿ ಪ್ರತಿದಿನವೂ ವಿಶೇಷ ಪೂಜೆ ಜರುಗಲಿದೆ. ಸಂಕೀರ್ಣದೊಳಗಿನ 'ವ್ಯಾಸ್ ಕಾ ತೆಖಾನಾ'ದಲ್ಲಿ ಪ್ರತಿದಿನ ಆರತಿ ಬೆಳಗಲಾಗುತ್ತದೆ ಎಂದು ಹಿಂದೂ ಪರವಾಗಿ ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿಷ್ಣು ಶಂಕರ್ ಜೈನ್ ಮಾಹಿತಿ ನೀಡಿ, ಐದು ಬಾರಿ ನಡೆಯಲಿರುವ ಆರತಿ ಸಮಯದ ವೇಳಾಪಟ್ಟಿ ಪ್ರಕಟಿಸಿದ್ದಾರೆ. "ಪ್ರತಿದಿನ ಐದು ಆರತಿಗಳು ನಡೆಯಲಿವೆ. 1) ಮಂಗಳಾರತಿ- ಬೆಳಿಗ್ಗೆ 3:30, ಭೋಗ್- ಮಧ್ಯಾಹ್ನ 12ಕ್ಕೆ, ಅಪರಾಹ್ನ ಆರತಿ-ಸಂಜೆ 4, ಸಂಯ್ಕಾಲ್- ಸಂಜೆ 7, ಶಯನ್ ಆರತಿ- ರಾತ್ರಿ 10:30ಕ್ಕೆ ಜರುಗಲಿದೆ" ಎಂದು ಬರೆದುಕೊಂಡಿದ್ದಾರೆ.
ವಾರಣಾಸಿ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಬುಧವಾರ ಅನುಮತಿಸಿತ್ತು. ಆದೇಶದ ಪ್ರಕಾರ, ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ 'ವ್ಯಾಸ್ ಕಾ ತೆಖಾನಾ'ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು. ಗುರುವಾರದ ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯವು ಭಕ್ತರಿಂದ ಪೂಜೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಪೂಜೆಗೆ ಅರ್ಚಕರನ್ನು ನಾಮನಿರ್ದೇಶನ ಮಾಡುವಂತೆಯೂ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ಗೆ ಸೂಚನೆ ನೀಡಿತ್ತು.