ಕರ್ನಾಟಕ

karnataka

ETV Bharat / bharat

ದೆಹಲಿ ಸಿಎಂಗೆ ಬಿಗ್‌ ರಿಲೀಫ್‌: ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ - ARVIND KEJRIWAL GETS INTERIM BAIL - ARVIND KEJRIWAL GETS INTERIM BAIL

Arvind Kejriwal Bail Hearing: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್‌ ನೀಡಿರುವ ಸುಪ್ರೀಂ ಕೋರ್ಟ್,​ ಇಂದು ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ.

ARVIND KEJRIWAL BAIL HEARING
ಮಾ. 31, 2024 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭಾರತ ಮೈತ್ರಿಕೂಟದ ರ್‍ಯಾಲಿಯಲ್ಲಿ ಬಂಧಿತ ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡವನ್ನು ಧರಿಸಿರುವ ಆಪ್​ ಬೆಂಬಲಿಗ. (ANI)

By ETV Bharat Karnataka Team

Published : May 10, 2024, 3:55 PM IST

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಈ ಮೂಲಕ ಅರವಿಂದ್ ಕೇಜ್ರಿವಾಲ್​ ಅವರ 50 ದಿನಗಳ ಸೆರೆವಾಸ ಅಂತ್ಯ ಕಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯಗಳಲ್ಲಿ ಅವರ ಭಾಗಿಯಾಗಲು ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿದೆ. ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರಕ್ಕೆ ಅವಕಾಶ ನೀಡಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಜೂನ್ 2 ರಂದು ಮರಳಿ ಕೋರ್ಟ್​ಗೆ ಶರಣಾಗಬೇಕು ಎಂದು ಸಹ ತಿಳಿಸಿದೆ.

ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಜೂನ್ 5 ರವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೇಜ್ರಿವಾಲ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದರು. ಆದರೆ, ಇದನ್ನು ತಳ್ಳಿ ಹಾಕಿದ ನ್ಯಾಯ ಪೀಠ, ಜೂನ್ 1 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಈ ನಿರ್ಧಾರಕ್ಕೆ ಕಾರಣಗಳನ್ನು ಒಳಗೊಂಡ ವಿವರವಾದ ಆದೇಶವನ್ನು ಸಂಜೆಯ ನಂತರ ಅಪ್‌ಲೋಡ್ ಮಾಡಲಾಗುವುದು ಎಂದು ಸಹ ಪೀಠ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ, ಇಡಿಯನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು, ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಸುಪ್ರೀಂ ಕೋರ್ಟ್​ನ ನ್ಯಾಯ ಪೀಠವು ಕೇಜ್ರಿವಾಲ್‌ ಅವರಿಗೆ ನಿರ್ದೇಶನ ನೀಡಬೇಕು ಎಂದು ಕಟುವಾಗಿ ವಾದಿಸಿದರು. ಏಪ್ರಿಲ್‌ನಲ್ಲಿ ಇದೇ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಎಎಪಿ ನಾಯಕ ಸಂಜಯ್ ಸಿಂಗ್ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಈಗಾಗಲೇ ನಿರ್ಬಂಧಿಸಲಾಗಿದೆ ಎಂದೂ ಸಹ ಪೀಠ ಹೇಳಿತು.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಮೇ 7ರಂದು ವಿಚಾರಣೆ ನಡೆಸಿತ್ತು. ಇಡಿ ಮತ್ತು ಕೇಜ್ರಿವಾಲ್ ಪರ ವಕೀಲರ ನಡುವಣ ತೀವ್ರ ವಾದ ಮತ್ತು ಪ್ರತಿವಾದದ ಬಳಿಕ ನ್ಯಾಯ ಪೀಠ ಮೇ 10 ರಂದು ತೀರ್ಪಿನ ದಿನಾಂಕವನ್ನು ನಿಗದಿಪಡಿಸಿತ್ತು. ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ತನ್ನ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಳ್ಳಿ ಹಾಕಿದ್ದರಿಂದ ಇದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಮತ್ತೊಂದೆಡೆ ಕೆಳ ನ್ಯಾಯಾಲಯದಿಂದ ಜಾಮೀನು ಸಿಗದ ಹಿನ್ನೆಲೆಯಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ದೆಹಲಿ ಹೈಕೋರ್ಟ್‌ ಮೆಟ್ಟಿಲು ಏರಿದ್ದು, ಅವರ ಜಾಮೀನು ಅರ್ಜಿ ವಿಚಾರಣೆ ಮೇ 24 ರಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಮಧ್ಯಂತರ ಜಾಮೀನು ನೀಡಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ಆಪ್ ನಾಯಕಿ ಅತಿಶಿ, ಇದು ಸತ್ಯದ ಗೆಲುವು... ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಮುಂದಾಗಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್​ಗೆ ಧನ್ಯವಾದ ಸಲ್ಲಿಸುವೆ. ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಹೊರಬರುತ್ತಾರೆ. ಸಂಜೆ ಅವರು ದೆಹಲಿ ಮತ್ತು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದಿದ್ದಾರೆ. ದೆಹಲಿ ಸಚಿವ ಮತ್ತು ಆಪ್ ನಾಯಕ ಗೋಪಾಲ್ ರೈ ಕೂಡ ಸುಪ್ರೀಂ ಕೋರ್ಟ್​ಗೆ ಧನ್ಯವಾದ ಹೇಳಿದರು.

ಇದನ್ನೂ ಓದಿ: ಕೇಜ್ರಿವಾಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದ ಆಪ್​: ಆರೋಪ ನಿರಾಕರಿಸಿದ ಜೈಲಧಿಕಾರಿಗಳು - Aravind Kejriwal in jail

ABOUT THE AUTHOR

...view details