ನವದೆಹಲಿ:ಹಳೆಯ ಕಾಶಿ ವಿಶ್ವನಾಥ ದೇಗುಲ ಎಂದೇ ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆಯನ್ನು ತಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು. ಇದರಿಂದ ವ್ಯಾಸ್ ತೆಹಖಾನಾದಲ್ಲಿ ಸನಾತನ ಸಂಪ್ರದಾಯದ ಪೂಜಾ ವಿಧಿವಿಧಾನಗಳು ಸಾಂಗವಾಗಿ ಸಾಗಲಿವೆ.
ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಜಿಲ್ಲಾ ಕೋರ್ಟ್ನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್ ಆದೇಶವನ್ನು ರದ್ದು ಮಾಡಲು ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್ ಪೂಜಾ ವಿಧಿವಿಧಾನಕ್ಕೆ ತಡೆ ನೀಡಲು ನಿರಾಕರಿಸಿದ್ದು, ಮಸೀದಿ ಸಮಿತಿಗೆ ದೊಡ್ಡ ಹಿನ್ನಡೆ ಉಂಟಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿ, ಹಿಂದೂ ಮತ್ತು ಮುಸ್ಲಿಂ ಕಡೆಯವರು ಜ್ಞಾನವಾಪಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ಜತೆಗೆ ಸುಪ್ರೀಂ ಅನುಮತಿ ಇಲ್ಲದೇ ಅಲ್ಲಿ ನಡೆಯುತ್ತಿರುವ ಪೂಜಾ ವಿಧಾನಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ತಾಕೀತು ಮಾಡಿದೆ.
ಬೇರೆ ಜಾಗದಲ್ಲಿ ಪ್ರಾರ್ಥನೆ, ಪೂಜೆ:ಜ್ಞಾನವಾಪಿಯ ತೆಹಖಾನಾಗಳಲ್ಲಿನ ಪೂಜೆ ಮತ್ತು ಪ್ರಾರ್ಥನೆಗೆ ಬರುವ ದಾರಿಗಳು ಬೇರೆಯಾಗಿದ್ದನ್ನು ಗುರುತಿಸಿರುವ ಕೋರ್ಟ್, ಹಿಂದೂಗಳು ದಕ್ಷಿಣದಿಂದ ಪ್ರವೇಶಿಸಿದರೆ, ಮುಸ್ಲಿಮರು ಉತ್ತರ ಭಾಗದಿಂದ ಪ್ರಾರ್ಥನೆಗೆ ಬರುತ್ತಾರೆ. ಹೀಗಾಗಿ ಪೂಜೆ ಮತ್ತು ಪ್ರಾರ್ಥನೆಗೆ ಯಾವುದೇ ಅಡ್ಡಿ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಎರಡೂ ಸಮುದಾಯಗಳು ನಿಯಮಗಳನುಸಾರ ಧಾರ್ಮಿಕ ಆಚರಣೆ ಕೈಗೊಳ್ಳಬಹುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.