ಜಮ್ಮು/ಪೂಂಚ್: ಪೂಂಚ್ ಜಿಲ್ಲೆಯ ಮರ್ಹಾ ಬಫ್ಲಿಯಾಜ್ ಪ್ರದೇಶದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಶುಕ್ರವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಕೆಲವು ಉಗ್ರಗಾಮಿಗಳು ಇರುವ ಬಗ್ಗೆ ಗುರುವಾರ ತಡರಾತ್ರಿ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿದೆ. ಈ ಮಾಹಿತಿ ಆಧರಿಸಿ ಡಿಕೆಜಿ ಸಮೀಪದ ಮರ್ಹಾ ಬಫ್ಲಿಯಾಜ್ನ ಸಾಮಾನ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.
ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಬೆಹ್ರಮ್ಗಲಾ/ಸುರನ್ಕೋಟ್ ಎಸ್ಒಜಿ ಹಾಗೂ 9 ಪ್ಯಾರಾ ತಂಡದಿಂದ ಪೂಂಚ್ ಜಿಲ್ಲೆಯ ಪಿಎಸ್ ಸುರನ್ಕೋಟ್, ಡಿಕೆಜಿ ಜನರಲ್ ಏರಿಯಾದಲ್ಲಿ ಹುಡುಕಾಟ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಸುಮಾರು 3.30 ಹೊತ್ತಿಗೆ ಉಗ್ರರು ಎಸ್ಎಫ್ ಪಡೆಗಳ ಮೇಲೆ ಗುಂಡು ಹಾರಿಸಿದರು. ಸೈನಿಕರು ಕೂಡ ಗುಪ್ತ ಉಗ್ರರ ಮೇಲೆ ಪ್ರತಿದಾಳಿ ನಡೆಸಿದರು.
ಈ ಅಲ್ಪಾವಧಿಯ ಗುಂಡಿನ ಚಕಮಕಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ. ಕೆಲ ಹೊತ್ತಿನ ಬಳಿಕ ಗುಂಡಿನ ಚಕಮಕಿ ನಿಂತಿದ್ದು, ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಮಧ್ಯೆ ಪರಾರಿಯಾಗಿರುವ ಉಗ್ರರ ಪತ್ತೆಗೆ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಬಿರು ಬಿಸಿಲಿನಲ್ಲೂ ಗಡಿ ಕಾಯುತ್ತಿರುವ ಯೋಧರು: ದೇಶದ ಇತರ ಭಾಗಗಳಂತೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ತೀವ್ರ ಬಿಸಿಲು ಇದೆ. ಈ ಬಿರು ಬಿಸಲಿನ ನಡುವೆಯೂ ಬಿಎಸ್ಎಫ್ನ ವೀರ ಯೋಧರು ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಜಮ್ಮುವಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಈ ಬಿಸಿಲಿನ ನಡುವೆಯೂ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಮಹಿಳಾ ಸೈನಿಕರು ಸಾಂಬಾದಲ್ಲಿ ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ದೇಶದ ರಕ್ಷಣೆಯಲ್ಲಿ ನಿರತರಾಗಿದ್ದಾರೆ.
ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೈನಿಕರು ಅಲರ್ಟ್ ಆಗಿದ್ದಾರೆ. ವಿಪರೀತ ಬಿಸಿಲಿನಲ್ಲಿಯೂ ಸೈನಿಕರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ದೇಶದ ಗೌರವ, ಘನತೆ ಕಾಪಾಡಲು ಬಿಎಸ್ಎಫ್ ಮಹಿಳಾ ಯೋಧರು ದಿನದ 24 ಗಂಟೆಯೂ ಶತ್ರುಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಅವಳಿ ಭಯೋತ್ಪಾದಕ ದಾಳಿ: ಬಿಜೆಪಿ ಕಾರ್ಯಕರ್ತನ ಕೊಲೆ, ಪ್ರವಾಸಿ ದಂಪತಿಗೆ ಗಾಯ - Twin Terror Attacks in Kashmir