ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'. ಮಲಯಾಳಂನ ಸ್ಟಾರ್ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನದ ಚಿತ್ರದಲ್ಲಿ ನಾಯಕ ನಟನಾಗಿ ಕೆಜಿಎಫ್ ಸ್ಟಾರ್ ನಟಿಸುತ್ತಿದ್ದು, ನಾಯಕ ನಟಿ ಯಾರೆಂಬ ಪ್ರಶ್ನೆ ಬಹಳ ದಿನಗಳಿಂದಲೂ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರೋ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಚಿತ್ರದಲ್ಲಿದ್ದಾರೆ ಎಂಬುದು ಇತ್ತೀಚೆಗೆ ದೃಢಪಟ್ಟಿದೆ. ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಗೀತು ಮೋಹನ್ ದಾಸ್ ಶೀಘ್ರದಲ್ಲೇ ಘೋಷಿಸಲಿದ್ದಾರೆ: "ನಾನು ಪ್ರಸ್ತುತ ಯಶ್ ಮುಖ್ಯಭೂಮಿಕೆಯ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ನಯನತಾರಾ ಕೂಡಾ ಇತ್ತೀಚೆಗೆ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ನಾನೀಗ ಬಹಿರಂಗಪಡಿಸುವಂತಿಲ್ಲ. ನಿರ್ದೇಶಕಿ ಗೀತು ಮೋಹನ್ ದಾಸ್ ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರೆ. ಅಲ್ಲಿವರೆಗೂ ನೀವು ಕಾಯಬೇಕಿದೆ" ಎಂದು ನಟ ಅಕ್ಷಯ್ ಒಬೆರಾಯ್ ತಿಳಿಸಿದರು. ಆದರೆ, ಈ ಸಿನಿಮಾದಲ್ಲಿ ನಯನತಾರಾ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಈ ಸಿನಿಮಾದೊಂದಿಗೆ ಅನೇಕ ತಾರೆಯರ ಹೆಸರು ಕೇಳಿಬಂತು. ಆರಂಭದಲ್ಲಿ ಕರೀನಾ ಕಪೂರ್ ಖಾನ್, ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಹಲವರ ಹೆಸರು ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಇವರ ಹೆಸರುಗಳು ಬಹುದಿನಗಳವರೆಗೆ ಟ್ರೆಂಡಿಗ್ನಲ್ಲಿತ್ತು. ಆದ್ರೆ ಚಿತ್ರತಂಡ ಊಹಾಪೋಹಗಳಿಂದ ದೂರವಿರಿ ಎಂದು ಕೇಳಿಕೊಂಡಿತ್ತು. ಜೊತೆಗೆ, ಶೀಘ್ರದಲ್ಲೇ ಅಧಿಕೃತ ಮಾಹಿತಿ ಒದಗಿಸುವ ಭರವಸೆಯೂ ನೀಡಿತ್ತು.ಇದೀಗ ನಟ ಅಕ್ಷಯ್ ಒಬೆರಾಯ್ ಅವರೇ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿರುವ ಹಿನ್ನೆಲೆ ಸಿನಿಮಾ ಸುತ್ತಲಿನ ಸದ್ದು ಜೋರಾಗಿದೆ. ತಾವೂ ಕೂಡಾ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ 'ಟಾಕ್ಸಿಕ್' ಸಾಂಗ್ ಶೂಟಿಂಗ್: ಯಶ್ ಜೊತೆ ಕಿಯಾರಾ ಅಡ್ವಾಣಿ ಡ್ಯಾನ್ಸ್?
'ಟಾಕ್ಸಿಕ್' ಘೋಷಣೆ ಸಂದರ್ಭ ಚಿತ್ರದ ನಿರ್ದೇಶಕರು, ನಿರ್ಮಾಪಕರಷ್ಟೇ ರಿವೀಲ್ ಆಯ್ತು. ಯಶ್ ಪಾತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಮೊದಲು ಟೈಟಲ್ ಅನೌನ್ಸ್ ಆಯ್ತು, ಟೈಟಲ್ ಗ್ಲಿಂಪ್ಸ್ ಬಿಡುಗಡೆಗೊಳಿಸಿದ್ರು, ಇತ್ತೀಚೆಗೆ ಯಶ್ ಬರ್ತ್ಡೇ ಗ್ಲಿಂಪ್ಸ್ ಅನಾವರಣಗೊಂಡಿತು. ಇಷ್ಟು ಬಿಟ್ಟರೆ ನಿರ್ಮಾಪಕರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ದಳಪತಿ ವಿಜಯ್ ಕೊನೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಡೇಟ್ ಅನೌನ್ಸ್: ಟೈಟಲ್ ಏನು?
'ಟಾಕ್ಸಿಕ್' ಯಶ್ ಅವರ 19ನೇ ಚಿತ್ರ. ಕೆಜಿಎಫ್ 2 ನಂತರ ಬಹಳ ಗ್ಯಾಪ್ ತೆಗೆದುಕೊಂಡಿರುವ ಯಶ್ ಈ ಆ್ಯಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸಿನಿಮೀಯ ಅನುಭವ ಪೂರೈಸುವ ಪಣ ತೊಟ್ಟಿದ್ದಾರೆ. "ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್" ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿರುವ ಈ ಚಿತ್ರ ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಈ ಹಿಂದೆ ತಿಳಿಸಿದ್ದರು. ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಈ ಚಿತ್ರಕ್ಕೆ ಸಂಬಂಧಿಸಿದ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಇದು ಯೂಟ್ಯೂಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಯಶ್ ಅವರ ಲುಕ್ ಮತ್ತು ಮೇಕ್ ಓವರ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.