ನವದೆಹಲಿ:ಕ್ರಿಮಿನಲ್ ಪ್ರಕರಣದ ಸಾಕ್ಷಿಗಳಿಗೆ ಪೊಲೀಸ್ ಠಾಣೆಯೊಳಗೆ ಬೋಧನೆ ನೀಡಿರುವುದು ಆಘಾತಕಾರಿ ಎಂದು ಹೇಳಿರುವ ಸುಪ್ರೀಂ ಕೋರ್ಟ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಪಂಕಜ್ ಮಿಥಾಲ್ ಅವರಿದ್ದ ವಿಭಾಗೀಯ ಪೀಠ, ಇಡ್ಲಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಶುಕ್ರವಾರ ರದ್ದುಗೊಳಿಸಿದೆ. ಹಾಗೂ ಪ್ರಕರಣದ ಸಾಕ್ಷಿಗಳಿಗೆ ಬೋಧನೆ ನೀಡಿರುವ ನಿರ್ಣಾಯಕ ಅಂಶವನ್ನು ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಕಡೆಗಣಿಸಿರುವುದು ಆಶ್ಚರ್ಯಕರವಾಗಿದೆ. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೋಧಿಸಲು ಪೊಲೀಸರಿಗೆ ಅನುಮತಿ ಇಲ್ಲ. ಇದು ಪೊಲೀಸರಿಂದ 'ಅಧಿಕಾರದ ಸಂಪೂರ್ಣ ದುರುಪಯೋಗ'ವಾಗಿದೆ ಎಂದು ಹೇಳಿದೆ.
ಪೊಲೀಸ್ ಠಾಣೆಯೊಳಗೆ ಸಾಕ್ಷಿಗಳಿಗೆ ಬೋಧನೆ ಮಾಡಿರುವುದರ ಪರಿಣಾಮವನ್ನು ಯಾರಾದರೂ ಸಮಂಜಸವಾಗಿ ಊಹಿಸಬಹುದು. ಪ್ರಕರಣದ ಸಾಕ್ಷಿಗಳಿಗೆ ಪೊಲೀಸರು ಬೋಧನೆ ಮಾಡಿರುವುದು ಅವಿವೇಕದ ಕೃತ್ಯವಾಗಿದೆ. ಅವರೆಲ್ಲರೂ ಆಸಕ್ತ ಸಾಕ್ಷಿಗಳಾಗಿದ್ದರು. ಪ್ರಕರಣದಲ್ಲಿ ಇತರ ಪ್ರತ್ಯಕ್ಷ ಸಾಕ್ಷಿಗಳು ಲಭ್ಯವಿದ್ದರೂ ಪೊಲೀಸರು ಅವರನ್ನು ತಡೆಹಿಡಿದಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಸಾಕ್ಷಿಗಳಿಗೆ ಹಿಂದಿನ ದಿನವೇ ಪೊಲೀಸರು ಬೋಧನೆ ಮಾಡಿರುವ ಸಾಧ್ಯೆತಗಳಿರುವುದರಿಂದ ಅವರ ಸಾಕ್ಷ್ಯವನ್ನು ತಿರಸ್ಕರಿಸಬೇಕಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪೊಲೀಸರ ಈ ರೀತಿಯ ಹಸ್ತಕ್ಷೇಪ ಆಘಾತಕಾರಿಯಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.