ಶ್ರೀನಗರ (ಜಮ್ಮು & ಕಾಶ್ಮೀರ): ಶ್ರೀನಗರದ ಕಿಕ್ಕಿರಿದಿದ್ದ ಸಂಡೇ ಮಾರುಕಟ್ಟೆಯಲ್ಲಿ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಲಾಲ್ ಚೌಕ್‌ನಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಟಿಆರ್‌ಸಿ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಎಸ್‌ಎಂಹೆಚ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರದ ಬಳಿ ಇರುವ ಸಿಆರ್‌ಪಿಎಫ್ ಬಂಕರ್‌ನತ್ತ ಗ್ರೆನೇಡ್ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ದಾಳಿಯನ್ನು ಖಂಡಿಸಿದ್ದಾರೆ. "ಕಳೆದ ಕೆಲವು ದಿನಗಳಿಂದ ಕಣಿವೆಯ ಭಾಗಗಳಲ್ಲಿ ದಾಳಿಗಳು ಮತ್ತು ಎನ್‌ಕೌಂಟರ್‌ಗಳು ನಡೆಯುತ್ತಿವೆ. ಶ್ರೀನಗರದ ಸಂಡೇ ಮಾರ್ಕೆಟ್ನಲ್ಲಿ ಅಮಾಯಕ ವ್ಯಾಪಾರಿಗಳ ಮೇಲೆ ಗ್ರೆನೇಡ್ ದಾಳಿ ನಡೆದಿರುವುದು ಆತಂಕಕಾರಿಯಾಗಿದೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ಸಮರ್ಥನೀಯವಲ್ಲ. ಜನರು ಯಾವುದೇ ಭಯವಿಲ್ಲದೆ ತಮ್ಮ ಜೀವನ ನಡೆಸಲು ಸಾಧ್ಯವಾದಷ್ಟು ಬೇಗ ಇಂತಹ ದಾಳಿಗಳನ್ನು ಕೊನೆಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವಂತೆ" ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.