ಪಣಜಿ:ಗೋವಾದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ ವಿವಿಧ ಪ್ರಕರಣಗಳ ಬಗ್ಗೆ ಸಿಬಿಐ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ದಕ್ಷಿಣ ಗೋವಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಎಎಪಿ ಅಧ್ಯಕ್ಷ ಅಮಿತ್ ಪಾಲೇಕರ್, ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.
ಹಗರಣದ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸಬೇಕು. ಸಿಬಿಐ ಅಲ್ಲದಿದ್ದರೆ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.
ಸಾಮಾನ್ಯ ಹಗರಣದಂತೆ ಕಾಣುತ್ತಿಲ್ಲ:"ಇದೊಂದು ಸಾಮಾನ್ಯ ಹಗರಣದಂತೆ ಕಾಣುತ್ತಿಲ್ಲವಾದ್ದರಿಂದ ಇಡೀ ಹಗರಣದಲ್ಲಿ ಒಳಗಿನವರ ಪಾತ್ರವೇನಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಇದೊಂದು ದೊಡ್ಡ ದಂಧೆಯ ರೀತಿ ಕಾಣುತ್ತಿದೆ" ಎಂದು ಆರೋಪಿಸಿದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆಪ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳನ್ನು ಹಗರಣದ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಹಗರಣ ಬಯಲಾದ ನಂತರ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ ದೂರುಗಳು ದಾಖಲಾಗುತ್ತಿದ್ದು, ಹಣದ ಬದಲಿಗೆ ಸರ್ಕಾರಿ ನೌಕರಿಯ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಗೋವಾ ಪೊಲೀಸರು 6ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅಲ್ಲದೆ ಪೊಲೀಸರು ತನಿಖೆಗೊಳಪಡಿಸಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೆಲ್ಲ ನೋಡಿದರೆ ಹಗರಣವು ಆಳವಾಗಿ ಬೇರೂರಿದೆ ಎಂದು ಪಾಲೇಕರ್ ಹೇಳಿದ್ದಾರೆ. ಈ ಹಗರಣವು ಈಗ ಕೇವಲ ಹಣದ ವಿಚಾರವಾಗಿ ಉಳಿದಿಲ್ಲ, ಇದು ಜನರ ಜೀವಗಳನ್ನೂ ಬಲಿ ಪಡೆಯಲಾರಂಭಿಸಿರುವುದು ದುರಂತ ಎಂದು ಅವರು ಹೇಳಿದರು.