ನವದೆಹಲಿ:ಯಾವುದೇ ಸಿಗ್ನಲ್ ಇಲ್ಲದಿದ್ದರೂಗೂಡ್ಸ್ ರೈಲು ಚಲಿಸಲು ಲೋಕೋ ಪೈಲಟ್ ಮತ್ತು ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯವೇ ಕಾರಣ ಎಂದು ರೈಲ್ವೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಿದ ಬಳಿಕ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ತಪ್ಪಾಗಿದ್ದು ಎಲ್ಲಿ?: ಕಥುವಾ ನಿಲ್ದಾಣದಲ್ಲಿ ರೈಲಿನ ಇಂಜಿನ್ ಮತ್ತು 3 ವ್ಯಾಗನ್‌ಗಳನ್ನು ನಿಲ್ಲಿಸಲು ಹ್ಯಾಂಡ್ ಬ್ರೇಕ್‌ಗಳನ್ನು ಹಾಕಲಾಗಿತ್ತು. ರೈಲು ಮುಂದೆ ಚಲಿಸದಂತೆ ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಸಹ ಇಡಲಾಗಿತ್ತು ಎಂದು ಅಧಿಕಾರಿಗಳ ತನಿಖೆ ವೇಳೆ ಲೋಕೋ ಪೈಲಟ್ ಹೇಳಿಕೆ ನೀಡಿದರು. ಆದರೆ ಉಚ್ಚಿಬಸ್ಸಿ ನಿಲ್ದಾಣದಲ್ಲಿ ನಿಂತ ರೈಲನ್ನು ಪರಿಶೀಲಿಸಿದ ಸ್ಟೇಷನ್ ಮಾಸ್ಟರ್ಗೆ ಹ್ಯಾಂಡ್ ಬ್ರೇಕ್ ಹಾಕದಿರುವುದು ಕಂಡು ಬಂದಿದೆ. ಕಥುವಾ ಸ್ಟೇಷನ್ ಮಾಸ್ಟರ್ ರೈಲು ನಿಂತ ಮೇಲೆ ಬ್ರೇಕ್ ಹಾಕಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳದೆ ಇರುವುದರಿಂದ ಅವರು ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆರು ಮಂದಿ ಅಮಾನತು: ಕಥುವಾ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬ್ರೇಕ್ ವ್ಯಾನ್ ಇರಲಿಲ್ಲ. ಜಮ್ಮು ನಿಲ್ದಾಣಕ್ಕೆ ರೈಲನ್ನು ಓಡಿಸಲು ಕಂಟ್ರೋಲ್ ರೂಂ ಹೇಳಿದ ನಂತರ, ಬ್ರೇಕ್ ವ್ಯಾನ್ ಇಲ್ಲ ಎಂದು ಲೋಕೋ ಪೈಲಟ್ ಉತ್ತರಿಸಿದರು. ಮಾಡೋದೇನು ಇಲ್ಲ, ರೈಲನ್ನು ಅಲ್ಲೇ ಬಿಟ್ಟು ಡ್ಯೂಟಿಯಿಂದ ವಿರಾಮ ತೆಗೆದುಕೊಳ್ಳಿ ಎಂದು ಕಂಟ್ರೋಲ್ ರೂಂ ಹೇಳಿದೆ. ಸ್ಟೇಷನ್ ಮಾಸ್ಟರ್ಗೆ ಕೀ ಕೊಟ್ಟು ಲೋಕೋ ಪೈಲಟ್ ಅಲ್ಲಿಂದ ತೆರಳಿದರು. ಆದರೆ ಈ ವೇಳೆ ಲೋಕೋ ಪೈಲಟ್ ರಿಜಿಸ್ಟರ್ನಲ್ಲಿ ಯಾವುದೇ ಮಾಹಿತಿ ನಮೂದಿಸಿರಲಿಲ್ಲ. ಅಷ್ಟೇ ಅಲ್ಲ ಸಹಿ ಕೂಡ ಹಾಕಿರಲಿಲ್ಲ. ರೈಲ್ವೇ ನಿಯಮಗಳ ಪ್ರಕಾರ, ರೈಲನ್ನು ಮಾನವರಹಿತವಾಗಿ ನಿಲ್ಲಿಸುವಾಗ ಸ್ಟೇಷನ್ ಮಾಸ್ಟರ್ ಲೋಕೋ ಪೈಲಟ್‌ಗೆ ಲಿಖಿತ ಅನುಮತಿ ನೀಡಬೇಕು. ಇಲ್ಲಿ ಆ ರೀತಿ ಯಾವುದೇ ಕೆಲಸ ಆಗಿರಲಿಲ್ಲ. ಈ ಹಿನ್ನೆಲೆ ತನಿಖೆಯ ಬಳಿಕ ಆರು ಮಂದಿ ರೈಲ್ವೆ ನೌಕರರನ್ನು ಅಮಾನತುಗೊಳಿಸಲಾಗಿದೆ.
ನೂರರ ವೇಗದಲ್ಲಿ ರೈಲು:ರೈಲ್ವೇ ನಿರ್ಮಾಣ ಸಾಮಗ್ರಿಗಳನ್ನು ಹೊತ್ತ ಗೂಡ್ಸ್ ರೈಲು ಕಥುವಾದಿಂದ ಉಚ್ಚಿಬಸ್ಸಿ ನಿಲ್ದಾಣದವರೆಗೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಇಲ್ಲದೆ ಸುಮಾರು 75 ಕಿ.ಮೀ ಪ್ರಯಾಣಿಸಿತು. ಒಂದು ಹಂತದಲ್ಲಿ ರೈಲಿನ ವೇಗ ಗಂಟೆಗೆ 100 ಕಿಲೋಮೀಟರ್ ತಲುಪಿತ್ತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಂಜಿನ್ ಚಾಲನೆಯಲ್ಲಿರಲಿಲ್ಲ ಮತ್ತು ರೈಲು ಇಳಿ ಜಾರಿನ ಹಳಿಗಳ ಮೇಲೆ ಮುಂದಕ್ಕೆ ಚಲಿಸಿತು. ಮಾರ್ಗಮಧ್ಯೆ 8ರಿಂದ 9 ನಿಲ್ದಾಣಗಳನ್ನು ದಾಟಿದೆ. ಅದೃಷ್ಟವಶಾತ್ ಎದುರುಗಡೆ ಯಾವುದೇ ರೈಲುಗಳು ಬರದ ಕಾರಣ ಭಾರೀ ಅನಾಹುತ ತಪ್ಪಿದೆ. ಕೊನೆಗೆ ರೈಲ್ವೇ ಅಧಿಕಾರಿಗಳು ಉಚ್ಚಿಬಸ್ಸಿ ನಿಲ್ದಾಣದಲ್ಲಿ ಮರಳಿನ ಚೀಲಗಳಿಂದ ರೈಲನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
ಓದಿ:ಲೋಕೋ ಪೈಲಟ್ ಇಲ್ಲದೆ 78 ಕಿ.ಮೀ. ಚಲಿಸಿದ ರೈಲು: ಗೂಡ್ಸ್ ಟ್ರೈನ್ ನಿಲ್ಲಿಸಲು ಸಿಬ್ಬಂದಿ ಹರಸಾಹಸ