ನವದೆಹಲಿ:ವೈದ್ಯಕೀಯ ನಿರ್ಲಕ್ಷ್ಯ ಆರೋಪದ ಮೇಲೆ ಕೇರಳದ ಆಲಪ್ಪುಳ ಆಸ್ಪತ್ರೆಯ ನಾಲ್ವರು ವೈದ್ಯರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಿದೆ.
ನವಜಾತ ಶಿಶುವಿನ ಜನನದ ಸಂದರ್ಭದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದರಿಂದ ಆ ಮಗು ಹಲವು ಗಂಭೀರ ಸಮಸ್ಯೆಗಳಿಗೆ ತುತ್ತಾಗಿದೆ. ಇದಕ್ಕೆ ಚಿಕಿತ್ಸೆ ನಡೆಸಿದ ವೈದ್ಯರೇ ಕಾರಣ. ಗರ್ಭಾವಸ್ಥೆಯಲ್ಲಿ ಮಗುವಿನ ವಿರೂಪಗಳನ್ನು ಪತ್ತೆ ಮಾಡಲು ಅವರು ವಿಫಲರಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?ಮಗುವಿನ ಪೋಷಕರಾದ ಅನೀಶ್ ಮತ್ತು ಸುರುಮಿ ಅವರು ನೀಡಿದ ದೂರಿನ ಆಧಾರದ ಮೇಲೆ ಆಲಪ್ಪುಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಆಲಪ್ಪುಳದ ಕಡಪ್ಪುರಂ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿದ ಇಬ್ಬರು ಮಹಿಳಾ ವೈದ್ಯರು ಮತ್ತು ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ನ ಇಬ್ಬರು ವೈದ್ಯರು ಸೇರಿದ್ದಾರೆ.
ಗರ್ಭಾವಸ್ಥೆಯಲ್ಲಿ ವೈದ್ಯರು ದೋಷಗಳನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ ಅಥವಾ ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿಲ್ಲ. ಹೆರಿಗೆಯಾದ ನಾಲ್ಕು ದಿನಗಳ ನಂತರವೇ ಮಗುವನ್ನು ತೋರಿಸಲಾಗಿದೆ. ಮಗು ಗಂಭೀರ ಅಂಗವಿಕಲ ಸಮಸ್ಯೆಯಿಂದ ಬಳಲುತ್ತಿದೆ. ಜನಿಸಿ 20 ದಿನವಾದರೂ ಬಾಯಿ ತೆಗೆಯುತ್ತಿಲ್ಲ. ಕಿವಿ ಮತ್ತು ಮೂಗಿನಲ್ಲಿ ಗಂಭೀರ ಆನುವಂಶಿಕ ಅಸ್ವಸ್ಥತೆಗಳಿವೆ ಎಂದು ಪೋಷಕರು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಕಾರಣ:ಕಡಪ್ಪುರಂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸುರುಮಿ (35) ಅವರನ್ನು ಅಕ್ಟೋಬರ್ 30 ರಂದು ಹೆರಿಗೆಗೆ ದಾಖಲಿಸಲಾಗಿತ್ತು. ಬಳಿಕ, ಅಲ್ಲಿಂದ ಅಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಂಸಿಎಚ್) ಕಳುಹಿಸಲಾಗಿದೆ. ನವೆಂಬರ್ 8 ರಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವಿಗೆ ಜನ್ಮ ನೀಡಲಾಯಿತು. ಆದರೆ, ಮಗುವು ಗಂಭೀರ ಸ್ವರೂಪದ ವಿಕಲಾಂಗತೆಯನ್ನು ಹೊಂದಿದೆ. ವೈದ್ಯರ ನಿರ್ಲಕ್ಷ್ಯ ಕಾರಣದಿಂದ ಮಗು ಇಂತಹ ಸ್ಥಿತಿಗೆ ತಲುಪಿದೆ ಎಂದು ಪೋಷಕರು ದೂರಿದ್ದಾರೆ.
ಪೋಷಕರ ಆರೋಪವನ್ನು ವೈದ್ಯರು ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ಮಾಡಿಸಲಾದ ತಪಾಸಣೆಯಲ್ಲೂ ಯಾವುದೇ ದೋಷಗಳಿರಲಿಲ್ಲ ಎಂದು ಹೇಳಿದ್ದಾರೆ.
ತನಿಖೆಗೆ ವಿಶೇಷ ತಂಡ:ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶೀಘ್ರವೇ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಆರೋಗ್ಯ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ. ವೈದ್ಯರು ಮತ್ತು ಸ್ಕ್ಯಾನಿಂಗ್ ಸೆಂಟರ್ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ಲೋಪ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕೇರಳ: ಅಕ್ರಮವಾಗಿ ಸಮಾಜ ಕಲ್ಯಾಣ ಪಿಂಚಣಿ ಪಡೆಯುತ್ತಿರುವ 1,458 ಸರ್ಕಾರಿ ನೌಕರರು!