ಹೂವುಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮನೆ ಮುಂದೆ ಬಣ್ಣ ಬಣ್ಣದ ಹೂವುಗಳು ಅರಳಿ ನಲಿಯುವುದನ್ನು ನೋಡುವುದೇ ಚೆಂದ. ಅದರಲ್ಲೂ ಬಣ್ಣ ಬಣ್ಣದ ಗುಲಾಬಿ ಹೂವುಗಳು ಗಿಡದ ತುಂಬಾ ನಗುತ್ತಿದ್ದರೆ ಮನೆ ಮುಂದೆ ಬೇರೆ ರಂಗೋಲಿಯೇ ಬೇಡ. ಮನೆ ಮುಂದೆ ಹೂವಿನ ತೋಟ ನಿರ್ಮಿಸುವುದು ಬಹುತೇಕರ ಹವ್ಯಾಸವಾಗಿರುತ್ತದೆ. ಗುಲಾಬಿ ಅನೇಕ ಪ್ರಭೇದಗಳನ್ನು ಹೊಂದಿರುವ ಕಾರಣ ತೋಟಗಾರರು ಮೊದಲು ಕೈಹಾಕುವುದೇ ಗುಲಾಬಿ ಸಸ್ಯಗಳಿಗೆ. ಹಾಗೆ ಶ್ರಮಪಟ್ಟು, ಬಹಳ ಆಸೆಯಿಂದ ನೆಟ್ಟ ಗಿಡಗಳಲ್ಲಿ ಹೂವುಗಳು ಅರಳದೇ ಹೋದರೆ ಬೇಸರವಾಗುವುದು ಖಂಡಿತ.
ಇನ್ನು ಮುಂದೆ ನೀವು ಮನೆ ಮುಂದೆ, ಹಿತ್ತಲಲ್ಲಿರುವ ಗಿಡಗಳಲ್ಲಿ ಹೂವುಗಳು ಅರಳದೇ ಇದ್ದರೆ ಚಿಂತಿಸುವ ಹಾಗೂ ಯಾವುದೋ ರಾಸಾಯನಿಕಗಳನ್ನು ಸಿಂಪಡಿಸುವ ಅಗತ್ಯವಿಲ್ಲ. ನಮ್ಮ ಮನೆಯಲ್ಲೇ ಕಸವೆಂದು ಎಸೆಯುವ ವಸ್ತುವನ್ನೇ ಗುಲಾಬಿ ಗಿಡಗಳ ಬುಡಕ್ಕೆ ಹಾಕಿದರೆ ಹೂವುಗಳು ಅರಳಲು ಪ್ರಾರಂಭಿಸುತ್ತವೆ. ಆ ವಸ್ತು ಯಾವುದು ಅನ್ನೋದರ ಮಾಹಿತಿ ಇಲ್ಲಿದೆ.
ಅಕ್ಕಿ ತೊಳೆದ ನೀರು ಉಪಯೋಗಿಸಿ; ಪ್ರತಿ ಮನೆಯಲ್ಲೂ ದಿನನಿತ್ಯ ಬಳಸುವ ಅಕ್ಕಿ ತೊಳೆದ ನೀರನ್ನು ಏನು ಮಾಡುತ್ತೇವೆ? ಯಾವುದೇ ಯೋಚನೆ ಮಾಡದೆಯೇ ಚೆಲ್ಲುತ್ತೇವೆ. ಈ ಅಕ್ಕಿ ತೊಳೆದ ನೀರನ್ನು ಸಂಗ್ರಹಿಸಿ ತೋಟಕ್ಕೆ ಬಳಸಿದರೆ, ಹೂವಿನ ಗಿಡಗಳಲ್ಲಿ ಬದಲಾವಣೆ ಕಾಣಬಹುದು. ನೀವೂ ಕೂಡ ಹೂಗಳು ಅರಳಿ, ಮನಸ್ಸು ಮತ್ತು ಕಣ್ಣುಗಳಿಗೆ ಉಲ್ಲಾಸ ನೀಡುವ ಉದ್ಯಾನಗಳನ್ನು ಸಿದ್ಧಪಡಿಸಬಹುದು.
ನರ್ಸರಿಯಿಂದ ವಿವಿಧ ತಳಿಯ ಗುಲಾಬಿ ಗಿಡಗಳನ್ನು ಖರೀದಿಸುವ ಅನೇಕ ಜನರು ನಂತರ ಹೂವುಗಳರದೆ ನಿರಾಶೆಗೊಂಡಿರುತ್ತಾರೆ. ನರ್ಸರಿಯಿಂದ ತರುವಾಗ ಗೊಂಚಲು ಗೊಂಚಲು ಹೂವುಗಳಿದ್ದ ಗಿಡದಲ್ಲಿ ಈಗ ಹೂವುಗಳು ಅರಳುತ್ತಿಲ್ಲ ಎಂಬುದು ಹಲವರ ಮಾತು. ಅಂತಹವರಿಗೆ ಈ ವಿಧಾನ ಖುಷಿ ತರುತ್ತದೆ.
ಬಹಳ ದಿನಗಳಿಂದ ಹೂವುಗಳೇ ಅರಳಿರದ ಗಿಡಗಳಲ್ಲೂ ಹೂವುಗಳು ಬಿಡುವಂತೆ ಮಾಡಲು ಸಾಧ್ಯ ಈ ವಿಧಾನದಿಂದ. ಮನೆಯಲ್ಲಿ ಪ್ರತಿದಿನ ಅಕ್ಕಿ ತೊಳೆದ ನೀರು ಸಿಗುತ್ತದೆ. ನೀವು ಪ್ರತಿದಿನ ಬೆಳಗ್ಗೆ ನಿಮ್ಮ ಗುಲಾಬಿ ಗಿಡಗಳಿಗೆ ಅಕ್ಕಿ ತೊಳೆದ ನೀರನ್ನು ಸುರಿದರೆ, ಗಿಡಗಳಲ್ಲಿ ಬೇಗನೆ ಹೊಸ ಚಿಗುರುಗಳು ಮತ್ತು ಮೊಗ್ಗುಗಳನ್ನು ಮೊಳಕೆಯೊಡೆಯುತ್ತವೆ. ರಸಗೊಬ್ಬರಕ್ಕಾಗಿ ಹಣವನ್ನು ಖರ್ಚು ಮಾಡದೆ ನೀವು ಹೂವುಗಳನ್ನು ಬೆಳೆಯಬಹುದು. ಇನ್ನು ಮುಂದೆ ಅಕ್ಕಿ ತೊಳೆದ ನೀರು ಎಂದು ಅನುಮಾನದಿಂದ ಮುಖ ಗಂಟಿಕ್ಕಿಕೊಳ್ಳಬೇಕಾಗಿಲ್ಲ.
ಈ ನೀರು ಮಣ್ಣಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ನೀವು ನಿಯಮಿತವಾಗಿ ಈ ನೀರನ್ನು ಸುರಿಯುತ್ತಿದ್ದರೆ, ಸಸ್ಯಗಳು ಹುಲುಸಾಗಿ, ಹೂವುಗಳು ಅರಳುತ್ತವೆ ಎನ್ನುತ್ತವೆ ಅಧ್ಯಯನಗಳು.
ತಜ್ಞರ ವರದಿಗಳು ಹೀಗಿವೆ: ಇಂಡೋನೇಷ್ಯಾದ ಹಸನುದ್ದೀನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗ ಮತ್ತು ಮಲೇಷ್ಯಾದ ಪುತ್ರಾ ಯೂನಿವರ್ಸಿಟಿ ಲ್ಯಾಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಫ್ಯಾಕಲ್ಟಿ ನಡೆಸಿದ ಅಧ್ಯಯನಗಳಲ್ಲಿ ಅಕ್ಕಿ ತೊಳೆದ ನೀರು ಸಸ್ಯಗಳ ಬೆಳವಣಿಗೆಗೆ ಸೂಕ್ತವಾಗಿದೆ ಎಂದು ಕಂಡುಹಿಡಿದಿದೆ.
ಈ ನೀರು ಸಸ್ಯಗಳ ಬೆಳವಣಿಗೆಯನ್ನು ಪೋಷಿಸುತ್ತದೆ ಮತ್ತು ಅವು ಹೂವುಗಳು ಅರಳಲು ಮತ್ತು ಫಲ ನೀಡಲು ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ನೀರಿನಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ಇತರ ಸಸ್ಯ ಘಟಕಗಳ ಉಪಸ್ಥಿತಿ. ಇದಲ್ಲದೆ, ಇದು ಇನ್ನೂ ಅನೇಕ ಘಟಕಗಳನ್ನು ಒಳಗೊಂಡಿದೆ ಎಂದು ವರದಿ ಹೇಳುತ್ತದೆ.
ಮಲೇಷ್ಯಾದಲ್ಲಿ ನಡೆಸಿದ ಅಧ್ಯಯನ, ಅಕ್ಕಿ ತೊಳೆದ ನೀರು ಅತ್ಯುತ್ತಮ ಸಾವಯವ ಗೊಬ್ಬರವಾಗಿದೆ. ಈ ನೀರಿನಲ್ಲಿ ಲೀಚ್ಡ್ ಪೋಷಕಾಂಶಗಳಿವೆ. ಇವು ಸಸ್ಯಗಳಿಗೆ ಮಾತ್ರವಲ್ಲದೆ ತರಕಾರಿ ಗಿಡಗಳಿಗೂ ಪ್ರಯೋಜನಕಾರಿ. ಈ ನೀರು ಸಾಸಿವೆ, ಟೊಮೆಟೊ ಮತ್ತು ಬದನೆಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳುತ್ತದೆ.
ಅಕ್ಕಿ ತೊಳೆದ ನೀರಿನಲ್ಲಿರುವ ಪದಾರ್ಥಗಳು:
ಪದಾರ್ಥಗಳು | ಪ್ರಮಾಣ (%) |
ಪ್ರೋಟೀನ್ | 6-8% |
ಕಚ್ಚಾ ಫೈಬರ್ | 30-40% |
ಅಮೈನೋ ಆಮ್ಲಗಳು | 10-20% |
ರಂಜಕ | 45-50% |
ಕಬ್ಬಿಣ | 45-50% |
ಸತು | 10-12% |
ಪೊಟ್ಯಾಸಿಯಮ್ | 40-45% |
ಥಯಾಮಿನ್ | 55-60% |
ರಿಬೋಫ್ಲಾವಿನ್ (ವಿಟಮಿನ್ ಬಿ 2) | 25-30% |
ನಿಯಾಸಿನ್ (ನಿಕೋಟಿನಿಕ್ ಆಮ್ಲ) | 60-65% |
ಜೊತೆಗೆ, ಈ ನೀರಿನಲ್ಲಿರುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಕೂಡ ಸಸ್ಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಕ್ಕಿ ತೊಳೆದ ನೀರಿನಲ್ಲಿರುವ ಪಿಷ್ಟವು ಸಸ್ಯಗಳಲ್ಲಿನ ಜೀವಕೋಶಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಮತ್ತು ಇದು ಬೆಳವಣಿಗೆಗೂ ತುಂಬಾ ಸಹಕಾರಿ ಎಂದು ವರದಿಗಳು ಸೂಚಿಸುತ್ತವೆ.
ಏಕೆಂದರೆ ಪಿಷ್ಟವು ಸಸ್ಯಗಳಿಗೆ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ. ಅಕ್ಕಿ ತೊಳೆದ ನೀರು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾವನ್ನು ಒಡೆಯುತ್ತದೆ ಮತ್ತು ಸಸ್ಯಗಳು ಬೆಳೆಯಲು ಉಪಯುಕ್ತ ಪೋಷಕಾಂಶಗಳಾಗಿ ಪರಿವರ್ತಿಸುತ್ತದೆ ಎಂದು ವರದಿಗಳು ಸೂಚಿಸುತ್ತವೆ.
ಇದನ್ನೂ ಓದಿ: Turmeric Disease: ನೈಸರ್ಗಿಕ ಮದ್ದು ಅರಿಶಿಣ ಗಿಡದಲ್ಲಿ ಪತ್ತೆಯಾಯ್ತು ಹೊಸ ರೋಗ; ತಜ್ಞರು ಹೇಳುವುದೇನು?