ರಾಮನಗರ : ಅಪಘಾತದಲ್ಲಿ ಮೃತಪಟ್ಟ ಯುವಕನ ಶವ ಸಂಸ್ಕಾರಕ್ಕೆ ಜಾಗ ನೀಡಲಿಲ್ಲವೆಂದು ಆರೋಪಿಸಿ, ತಾಲೂಕು ಕಚೇರಿಯಲ್ಲಿಯೇ ಶವ ಇಟ್ಟು ಸಂಸ್ಕಾರಕ್ಕೆ ಮುಂದಾಗಿರುವ ಘಟನೆ ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ನಡೆದಿದೆ.
ತಾಲೂಕಿನ ದೇವರ ಹೊಸಹಳ್ಳಿ ಗ್ರಾಮದ ದಲಿತ ವ್ಯಕ್ತಿ ರಾಜೇಶ್ ಎಂಬುವವರು ಬೈಕ್ನಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದ್ದರಿಂದ ಬೈಕ್ನಿಂದ ಬಿದ್ದು ಸಾವನ್ನಪ್ಪಿದ್ದರು. ಮೃತನ ಶವ ಸಂಸ್ಕಾರ ಮಾಡಲು ದೇವರಹೊಸಹಳ್ಳಿ ಗ್ರಾಮದ ಕೆಲವರು ಸ್ಮಶಾನ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರ ಮಾಡಲು ಬಿಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಶವವನ್ನ ತಾಲೂಕು ಆಡಳಿತ ಸೌಧದ ಮುಂದೆ ಇಟ್ಟು ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಭಟನಾಕಾರ ಶೇಖರ್ ಅವರು ಮಾತನಾಡಿ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಮುಂದಾದಾಗ ಗ್ರಾಮದ ಕೆಲವರು ಅಡ್ಡಿಪಡಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ದಲಿತರಿಗೆ ಸ್ಮಶಾನ ಭೂಮಿ ಕೊಡಲು ವಿಫಲವಾಗಿದೆ ಎಂದು ನಾವು ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಸುಡಲು ಮುಂದಾಗಿದ್ದೇವೆ. ಸ್ಮಶಾನದ ಜಾಗ ಮಂಜೂರಾಗುವ ತನಕ ನಾವು ಈ ಜಾಗವನ್ನ ಬಿಟ್ಟು ಹೋಗಲ್ಲ, ಹೆಣವನ್ನ ಇಲ್ಲಿಯೇ ಸುಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮದ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನ ಮನವೊಲಿಸುವ ಪ್ರಯತ್ನ ನಡೆಸಿದರು. ಅಂತ್ಯ ಸಂಸ್ಕಾರಕ್ಕೆ ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ತಹಶೀಲ್ದಾರ್ಗೆ ಒತ್ತಾಯಿಸಿದರು.
ಇದನ್ನೂ ಓದಿ : ಮೈಸೂರು: ಅರಣ್ಯದಲ್ಲಿ ಆದಿವಾಸಿ ಬಾಲಕನ ಶವಸಂಸ್ಕಾರಕ್ಕೆ ಪರದಾಟ