ದಿಯೋಘರ್(ಜಾರ್ಖಂಡ್): ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರಿಂದು ದಿಯೋಘರ್‌ನಲ್ಲಿರುವ ಬೈದ್ಯನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ, ಅವರು ದುಮ್ಕಾದ ಬಸುಕಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಗಾಲಿಕುರ್ಚಿಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಶಿಷ್ಟಾಚಾರದಂತೆ ಕಟ್ಟುನಿಟ್ಟಿನ ಭದ್ರತೆ ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ದಿಯೋಘರ್‌ಗೆ ಆಗಮಿಸಿದ ಮಾಜಿ ಪ್ರಧಾನಿಯನ್ನು ಜಿಲ್ಲಾಧಿಕಾರಿ ವಿಶಾಲ್ ಸಾಗರ್ ಮತ್ತು ಎಸ್‌ಪಿ ಅಜಿತ್ ಪೀಟರ್ ಸ್ವಾಗತಿಸಿದರು. ದೇವಸ್ಥಾನ ಭೇಟಿಗೂ ಮುನ್ನ ಮಾಧ್ಯಮದವರೊಂದಿಗೆ ಹೆಚ್.ಡಿ. ದೇವೇಗೌಡರು ಮಾತನಾಡಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಬಾಬಾ ಬೈದ್ಯನಾಥರಲ್ಲಿ ಪ್ರಾರ್ಥಿಸುತ್ತೇನೆ ಎಂದ ಅವರು, ಬೇರೆ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.