ನವದೆಹಲಿ/ಗುವಾಹಟಿ: ಕಾಂಗ್ರೆಸ್ ಮುಖಂಡ, ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಅವರ ಪತ್ನಿಗೆ ಪಾಕಿಸ್ತಾನ ಮತ್ತು ಐಎಸ್‌ಐ ಜೊತೆ ನಂಟಿದೆ ಎಂದು ಬಿಜೆಪಿ ಬುಧವಾರ ಗಂಭೀರ ಆರೋಪ ಮಾಡಿದೆ. ಆದರೆ, ಇದನ್ನು ಗೊಗೊಯ್ ನಿರಾಕರಿಸಿದ್ದು, "ನಗೆಪಾಟಲು ಮತ್ತು ಮನರಂಜನೆ ಅರ್ಹವಾಗಿದೆ" ಎಂದಿದ್ದಾರೆ.
ಬಿಜೆಪಿಯ ಆರೋಪವೇನು?: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಆರೋಪಿಸಿದಂತೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಅವರು ಪಾಕಿಸ್ತಾನದ ಯೋಜನಾ ಆಯೋಗದ ಸಲಹೆಗಾರ ಅಲಿ ತೌಕೀರ್ ಶೇಖ್ ಮತ್ತು ಐಎಸ್ಐ ಜೊತೆಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಅತ್ಯಂತ ಕಳವಳಕಾರಿ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗೊಗೊಯ್ ಬಳಿ ಸ್ಪಷ್ಟೀಕರಣ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಗೊಗೊಯ್ ಅವರ ಪತ್ನಿ ವಿದೇಶಿ ಪ್ರಜೆಯಾಗಿದ್ದಾರೆ. ಅವರು ಕೆಲಸ ಮಾಡುವ ಸಂಸ್ಥೆಗೆ ಭಾರತ ವಿರೋಧ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಹಣಕಾಸು ನೆರವು ನೀಡಿದ್ದಾರೆ. ಹೀಗಾಗಿ, ಈ ಪ್ರಶ್ನೆ ಉದ್ಭವಿಸಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಂಸದ ಗೌರವ್ ಗೊಗೊಯ್ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ ಎಂದು ಹೇಳಿದ್ದಾರೆ.
ಕುಟುಂಬಸ್ಥರೇ ಪಾಕಿಸ್ತಾನದ ಜೊತೆಗೆ ನಂಟು ಹೊಂದಿರುವ ಕಾರಣ, ಗೊಗೊಯ್ ಅವರು ದೇಶದ ಭದ್ರತೆ ದೃಷ್ಟಿಯಿಂದ ಉಪನಾಯಕನ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವೇ?. ರಾಹುಲ್ ಗಾಂಧಿ ಇತ್ತೀಚೆಗೆ ಭಾರತದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದರು. ಗೊಗೊಯ್ ಮತ್ತು ಅವರ ಪತ್ನಿಯ ನೆರವಿನಿಂದ ತಮ್ಮ ಹೋರಾಟ ರೂಪಿಸಲಿದ್ದಾರೆಯೇ ಎಂದು ಗೌರವ್ ಭಾಟಿಯಾ ಪ್ರಶ್ನಿಸಿದ್ದಾರೆ.
ಆರೋಪ ನಿರಾಕರಿಸಿದ ಗೊಗೊಯ್: ತಮ್ಮ ಪತ್ಮಿಯ ವಿರುದ್ಧ ಬಿಜೆಪಿ ಮಾಡಿರುವ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕ ಗೊಗೊಯ್ ನಿರಾಕರಿಸಿದ್ದಾರೆ. ಇದೊಂದು ನಗೆಪಾಟಲಿಗೆ ಈಡಾಗುವ ಮತ್ತು ಮನರಂಜನೆ ನೀಡುವಂತಿದೆ. ಬಿಜೆಪಿ ನನ್ನನ್ನು ಎದುರಿಸಲಾಗದೆ ಕುಟುಂಬದ ಮೇಲೆ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮೊದಲು ನನ್ನ ಮತ್ತು ಕುಟುಂಬದ ವಿರುದ್ಧ ಇದೇ ರೀತಿಯ ಅಪಪ್ರಚಾರ ನಡೆಸಲಾಗಿತ್ತು. ಆದರೆ, ಜನರು ನನ್ನನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಸರಿಯಾದ ಉತ್ತರ ನೀಡಿದರು. ತಮ್ಮ ಕುಟುಂಬದ ಮೇಲಿನ ಆರೋಪಗಳೆಲ್ಲವೂ ನಿರಾಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಶಿಂಧೆಗೆ ಪವಾರ್ ಸನ್ಮಾನ: ಶಿವಸೇನೆ ಆಕ್ಷೇಪ, ಎಲ್ಲದರಲ್ಲೂ ರಾಜಕೀಯ ಬೇಡವೆಂದ ಎನ್ಸಿಪಿ
'ಮಹಿಳಾ ಮೀಸಲು ಜಾರಿಗೆ ಡಿಲಿಮಿಟೇಶನ್ ಷರತ್ತು ಕಾನೂನು ಬಾಹಿರ': ಪಿಐಎಲ್ ದಾಖಲು, ಕೇಂದ್ರಕ್ಕೆ ನೋಟಿಸ್