ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆ 2023ರಲ್ಲಿನ 334ಎ(1) ಅಥವಾ ಕಲಂ 5ನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯವು, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕ ಕೇಂದ್ರ ಸರಕಾರಕ್ಕೆ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ ಹೆಸರಿನ ಸಂಘಟನೆಯು ಸಲ್ಲಿಸಿದ ಮನವಿಯಲ್ಲಿ, ಕಾಯ್ದೆಯನ್ನು ಜಾರಿಗೆ ತರಲು ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿಯಬೇಕೆಂಬ ಷರತ್ತು ಹಾಕಿರುವುದು ಕಾನೂನುಬಾಹಿರವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೂ ಒಳಗೊಂಡ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ನೇತೃತ್ವದ ನ್ಯಾಯಪೀಠವು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 9, 2025 ಕ್ಕೆ ಮುಂದೂಡಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಪ್ರಶಾಂತ್ ಭೂಷಣ್, 334 ಎ (1) ವಿಧಿಯು ಕ್ಷೇತ್ರಗಳ ಡಿಲಿಮಿಟೇಶನ್ ಅನ್ನು ಪೂರ್ವಾಪೇಕ್ಷಿತವೆಂದು ಪರಿಗಣಿಸುವುದು ಕಾಯ್ದೆಯ ಅನುಷ್ಠಾನವನ್ನು ಮುಂದೂಡುತ್ತದೆ ಎಂದು ಹೇಳಿದರು.
ಮಸೂದೆಯ ಅನುಷ್ಠಾನದ ನಂತರ ನಡೆಯುವ ಮೊದಲ ಜನಗಣತಿಯ ನಂತರ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಈ ಕಾಯ್ದೆ ಜಾರಿಯಾಗಲಿದೆ ಎಂದು ಮಸೂದೆಯಲ್ಲಿ ಷರತ್ತು ವಿಧಿಸಲಾಗಿದೆ.
ವಿಶೇಷವೆಂದರೆ, ಮಹಿಳಾ ಮೀಸಲಾತಿ ಮಸೂದೆಯ ಹಿಂದಿನ ಆವೃತ್ತಿಗಳಲ್ಲಿ ಅಂತಹ ಯಾವುದೇ ಷರತ್ತು ಇರಲಿಲ್ಲ ಮತ್ತು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕಾಯ್ದಿರಿಸಿದ ಇತರ ವರ್ಗಗಳಿಗೆ ಅಂತಹ ಯಾವುದೇ ಷರತ್ತನ್ನು ವಿಧಿಸಲಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೊದಲಿಗೆ ಜನಗಣತಿ ನಡೆಯಬೇಕು ಹಾಗೂ ಆ ಆಧಾರದಲ್ಲಿ ಡಿಲಿಮಿಟೇಶನ್ ಮಾಡಿದ ನಂತರವೇ ಮಹಿಳಾ ಮೀಸಲು ಕಾಯ್ದೆ ಜಾರಿಯಾಗಬೇಕೆಂಬ ಷರತ್ತಿನಲ್ಲಿ ಯಾವುದೇ ತರ್ಕವಿಲ್ಲ. ಡಿಲಿಮಿಟೇಶನ್ ಕಾಯ್ದೆಯ ಸೆಕ್ಷನ್ 9 ಉಪ-ವಿಭಾಗ (1) ರ ದೃಷ್ಟಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗಾಗಿ ಸ್ಥಾನಗಳ ಮರು ಹೊಂದಾಣಿಕೆ ಮತ್ತು ಹಂಚಿಕೆಯು ತರ್ಕಬದ್ಧ ಆಧಾರವನ್ನು ಹೊಂದಿದೆ. ಇದು ಈ ವರ್ಗಗಳಿಗೆ ಪ್ರಮಾಣಾನುಗುಣವಾಗಿ ಮೀಸಲಾತಿಯನ್ನು ನೀಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮಹಿಳೆಯರ ಜನಸಂಖ್ಯೆಯು ಭಾರತದಾದ್ಯಂತ ಸಮಾನವಾಗಿ ಹರಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮತ್ತು ಹಿಂದಿನ ಜನಗಣತಿಗಳು ಪ್ರಕಟಿಸಿದ ಅಂಕಿಅಂಶಗಳಿಂದ ಇದನ್ನು ಪರಿಶೀಲಿಸಬಹುದು ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.