ಕರ್ನಾಟಕ

karnataka

ETV Bharat / bharat

Father's Day Special: 7 ಹೆಣ್ಣುಮಕ್ಕಳನ್ನು ಪೊಲೀಸ್​ ಹುದ್ದೆಗೇರಿಸಿದ ಅಪ್ಪ - Seven Police Sisters - SEVEN POLICE SISTERS

Saran Seven Singh Sisters Story: ಇಂದು ತಂದೆಯಂದಿರ ದಿನ. ತಂದೆಗೂ ಒಂದಿನ ಬೇಕೇ?. ಹೌದು, ತಂದೆಗೊಂದಿನ ಬೇಡ. ಏಕೆಂದರೆ, ತಂದೆಯ ಋಣ ತೀರಿಸಲು ಒಂದು ದಿನದಲ್ಲಿ ಸಾಧ್ಯವೇ ಇಲ್ಲ. ಹಾಗಿದ್ದರೂ ತಂದೆಯ ಬೆವರ ಹನಿಗಳ ಹಿಂದೆ ಅನೇಕ ನೋವಿನ ಕಥೆಗಳಿರುತ್ತವೆ. ಅದು ಜಗತ್ತಿಗೆ ತಿಳಿಯದೇ ಹೋದರೆ ಅಪರಿಮಿತ ತ್ಯಾಗ, ಅದ್ಭುತ ಬದ್ಧತೆ, ಅಮಿತ ಪ್ರೀತಿಗೆ ಬೆಲೆ ಸಿಗದೇ ಹೋಗಬಹುದು. ಈ ನಿಟ್ಟಿನಲ್ಲಿ ಬಿಹಾರದ 8 ಹೆಣ್ಣುಮಕ್ಕಳ ತಂದೆಯೊಬ್ಬನ ಸ್ಫೂರ್ತಿದಾಯಕ ಕಥೆ ನಿಮಗಾಗಿ..

Father's Day Special
7 ಹೆಣ್ಣುಮಕ್ಕಳನ್ನು ಪೊಲೀಸ್​ ಹುದ್ದೆಗೇರಿಸಿದ ಅಪ್ಪ (ETV Bharat)

By ETV Bharat Karnataka Team

Published : Jun 16, 2024, 12:46 PM IST

ಸರಣ್(ಬಿಹಾರ್): "ನನ್ನ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಕಡಿಮೆಯೇನು?". ಇದು ಜನಪ್ರಿಯ ಹಿಂದಿ ಚಲನಚಿತ್ರವೊಂದರ ಸಂಭಾಷಣೆ. ಬಿಹಾರದ ಎಕ್ಮಾ ಎಂಬಲ್ಲಿನ ಕಠಿಣ ಪರಿಶ್ರಮಿ, ಬಡ ತಂದೆಯೊಬ್ಬನ ಬದುಕಿಗೆ ಈ ಸಂಭಾಷಣೆ ಅಕ್ಷರಶಃ ಸರಿಹೊಂದುತ್ತಿದೆ. ಪೈಲ್ವಾನ್ ಮಹಾವೀರ್ ಫೋಗಟ್ ಎಂಬವರು ಗಂಡು ಮಗುವಿನ ಹಂಬಲದಿಂದ ನಾಲ್ಕು ಹೆಣ್ಣು ಮಕ್ಕಳಿಗೆ ತಂದೆಯಾದ ಸುದ್ದಿಯನ್ನು ಈ ಹಿಂದೆ ನೀವು ಕೇಳಿರಬಹುದು. ಅದೇ ರೀತಿ, ಬಿಹಾರದ ಕಮಲ್ ಸಿಂಗ್ ಎಂಬ ವ್ಯಕ್ತಿಯೂ ಕೂಡಾ ಗಂಡು ಮಗು ಬೇಕೆಂದು ಆಸೆಪಟ್ಟು ಕೊನೆಗೆ 8 ಹೆಣ್ಣು ಮಕ್ಕಳ ತಂದೆಯಾದ ಕಥೆ ಇದು!. ಕೊನೆಗೆ 9ನೇ ಮಗು ಗಂಡಾಗಿ ಹುಟ್ಟಿದ ಬಳಿಕ ಇವರ ಗಂಡು ಮಗುವಿನ ಹಂಬಲ ಕೊನೆಗೊಂಡಿತು. ಆದರೆ ಇಲ್ಲಿ ಮುಖ್ಯವಾದ ಅಂಶ ಇದಲ್ಲ.

ಈ ಕಥೆ ರಾಜಧಾನಿ ಪಾಟ್ನಾದಿಂದ 70 ಕಿಲೋಮೀಟರ್ ದೂರದಲ್ಲಿರುವ ಸರನ್ ಜಿಲ್ಲೆಯ ಎಕ್ಮಾ ಗ್ರಾಮದ್ದು. ಇಲ್ಲಿನ ನಿವಾಸಿ ಕಮಲ್ ಸಿಂಗ್ ಎಂಬವರು ಶಾರದಾ ದೇವಿ ಅವರನ್ನು 1980ರಲ್ಲಿ ವಿವಾಹವಾಗಿದ್ದರು. ಬಡ ಕುಟುಂಬ. ಹೀಗಾಗಿ ಆರ್ಥಿಕ ಪರಿಸ್ಥಿತಿಯ ಕುರಿತು ವಿಶೇಷವಾಗಿ ಹೇಳಬೇಕೆಂದಿಲ್ಲ. ಮನೆಯಲ್ಲಿ ಒಬ್ಬೊಬ್ಬರಾಗಿ ಎಂಟು ಹೆಣ್ಣು ಮಕ್ಕಳು ಹುಟ್ಟಿದ ನಂತರ ಒಬ್ಬ ಮಗ ಹುಟ್ಟುತ್ತಾನೆ. ಈ ವಿಚಾರವಾಗಿ ಸಮಾಜದಿಂದ ಸಾಕಷ್ಟು ಅಪಹಾಸ್ಯ, ನಿಂದನೆಯನ್ನು ಈ ಕುಟುಂಬ ಮಾರುತ್ತರ ನೀಡದೇ ಕೇಳಬೇಕಾಯಿತು. ಮೌನವಾಗಿ ಕಣ್ಣೀರು ಸುರಿಸಿ, ನೋವು ಮರೆತು ಬದುಕಬೇಕಿತ್ತು.

ಸಂಬಂಧಿಕರಂತೂ ಹೆಣ್ಣು ಮಕ್ಕಳನ್ನು ಶಾಪ ಎಂದು ಹೀಗಳೆಯುತ್ತಿದ್ದರಂತೆ. ಇದನ್ನೆಲ್ಲಾ ಬಹಳಷ್ಟು ಕೇಳಿದ ನಂತರ, ಕುಟುಂಬದೊಂದಿಗೆ ಬಿಹಾರದ ಸರನ್ ಜಿಲ್ಲೆಯ ಪೂರ್ವಜರ ಮನೆ ತೊರೆದು ಅದೇ ಸರನ್‌ನ ಎಕ್ಮಾದಲ್ಲಿ ಸಿಂಗ್‌ ಕುಟುಂಬ ನೆಲೆಸುತ್ತದೆ. ಈ ಸಂದರ್ಭದಲ್ಲಿ ಬದುಕಿಗೆ ಆಸರೆಯಾಗಿದ್ದು ಹಿಟ್ಟಿನ ಗಿರಣಿ. ಸಮಾಜದ ಒತ್ತಡದ ನಡುವೆ ಹಿರಿ ಮಗಳ ಮದುವೆ ಮಾಡಿಸಿದರು. ಬಳಿಕ ಕಠಿಣ ಆರ್ಥಿಕ ಸ್ಥಿತಿಗತಿಗಳ ಹೊರತಾಗಿಯೂ, ಉಳಿದ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾರೆ ಸಿಂಗ್‌. ಇದರ ಫಲಿತಾಂಶವೇನು ಗೊತ್ತೇ?. ಇದೀಗ 7 ಮಂದಿ ಹೆಣ್ಣು ಮಕ್ಕಳೂ ಕೂಡಾ ಸರ್ಕಾರಿ ನೌಕರಿಯಲ್ಲಿದ್ದಾರೆ!.

ಕಮಲ್ ಸಿಂಗ್ ಅವರ 8 ಪುತ್ರಿಯರಲ್ಲಿ ಎರಡನೆಯವರಾದ ರಾಣಿ ಕುಮಾರಿ ಸಿಂಗ್ ಬಿಹಾರ್ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದರೆ, 3ನೇ ಮಗಳು ರೇಣು ಕುಮಾರಿ ಸಿಂಗ್ ಎಸ್‌ಎಸ್‌ಬಿಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. 4ನೇ ಮಗಳು ಸೋನಿ ಕುಮಾರಿ ಸಿಂಗ್ ಅವರಿಗೆ ಸಿಆರ್‌ಪಿಎಫ್‌ನಲ್ಲಿ ಕೆಲಸ. 5ನೇ ಮಗಳು ಪ್ರೀತಿ ಕುಮಾರಿ ಸಿಂಗ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 6ನೇ ಮಗಳು ಪಿಂಕಿ ಕುಮಾರಿ ಸಿಂಗ್ ಅಬಕಾರಿ ಇಲಾಖೆಯಲ್ಲಿದ್ದರೆ, 7ನೇ ಮಗಳು ರಿಂಕಿ ಸಿಂಗ್ ಬಿಹಾರ ಪೊಲೀಸ್‌ನಲ್ಲಿ ಕಾನ್‌ಸ್ಟೇಬಲ್ ಮತ್ತು 8ನೇ ಹಾಗೂ ಕಿರಿಯ ಮಗಳು ನನ್ಹಿ ಕುಮಾರಿ ಸಿಂಗ್ ಜಿಆರ್‌ಪಿ ಪಾಟ್ನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

"ಕಷ್ಟಪಟ್ಟು, ಪ್ರಾಮಾಣಿಕವಾಗಿ, ಸಂಪೂರ್ಣ ಸಮರ್ಪಣಾ ಭಾವ ಮತ್ತು ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಪಾಪಾ ಆಗಾಗ್ಗೆ ನಮಗೆ ಹೇಳುತ್ತಿದ್ದರು. ನಾವು ಅವರ ಮಾತಿನಂತೆ ನಡೆಯುತ್ತಿದ್ದೇವೆ. ಅದರ ಫಲಿತಾಂಶವನ್ನು ನೀವೀಗ ನೋಡುತ್ತಿದ್ದೀರಿ. ಇಂದು ನಮ್ಮ ತಂದೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ನಾವಿಂದು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತಿದ್ದೇವೆ. ಇದಕ್ಕೆ ನಮ್ಮ ತಂದೆ ಕಾರಣ. ನಾವು ಇಷ್ಟೊಂದು ಜನ ಹೆಣ್ಣು ಮಕ್ಕಳಿದ್ದುದಕ್ಕೆ ಜನರು ತಂದೆಯನ್ನು ಹೀಯಾಳಿಸುತ್ತಿದ್ದರು. ಹೆಣ್ಣುಮಕ್ಕಳು ಶಾಪವಲ್ಲ, ಆಶೀರ್ವಾದ ಎಂಬುದನ್ನು ನಾವಿಂದು ಸಾಬೀತುಮಾಡಿದ್ದೇವೆ''. - ರಿಂಕಿ, ಕಮಲ್ ಸಿಂಗ್ ಅವರ ಪುತ್ರಿ.

"ಬಾಲ್ಯದಿಂದಲೂ ನಮ್ಮದೇ ಆದ ಐಡೆಂಟಿಟಿ ಇಟ್ಟುಕೊಳ್ಳಬೇಕೆಂಬ ಗುರಿ ನಮಗಿತ್ತು. ನಮ್ಮ ತಂದೆ ಕಲಿಸಿದಂತೆಯೇ ಬದುಕಿನಲ್ಲಿ ಸಾಕಷ್ಟು ಹೋರಾಡಿ ಗೆದ್ದೆವು. ಇದಕ್ಕಾಗಿ ನಮಗೆ ಹೆಮ್ಮೆ ಇದೆ. ತಂದೆ ಕಷ್ಟಗಳ ನಡುವೆ ಛಲ ಬಿಡಲಿಲ್ಲ. ಕಷ್ಟಪಟ್ಟು ದುಡಿಯುತ್ತಿದ್ದರು. ನೆರೆಹೊರೆಯವರು ಮತ್ತು ಸಂಬಂಧಿಕರು ಆಗಾಗ್ಗೆ ತೆಗಳುತ್ತಿದ್ದರು. ಇದರ ಹೊರತಾಗಿಯೂ ತಂದೆ ನಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು''. - ASI ಪಿಂಕಿ ಸಿಂಗ್, ಇನ್ನೋರ್ವ ಪುತ್ರಿ.

"ಜನರು ನನ್ನನ್ನೂ ಹೀಯಾಳಿಸುತ್ತಿದ್ದರು. ನಿಮಗೆ 8 ಮಂದಿ ಅಕ್ಕಂದಿರಿದ್ದಾರೆ ಎನ್ನುತ್ತಾ ನಗುತ್ತಿದ್ದರು. ನಿನಗೇನೂ ಉಳಿಯುವುದಿಲ್ಲ. ಸಹೋದರಿಯರು ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಿದ್ದರು. ಆದರೆ, ನನಗೆ ನನ್ನ ಸಹೋದರಿಯರ ಬಗ್ಗೆ ಹೆಮ್ಮೆ ಇದೆ" - ರಾಜೀವ್, ಕಮಲ್ ಸಿಂಗ್ ಅವರ ಮಗ.

"ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅದಕ್ಕಾಗಿ ನಾವು ಹುಟ್ಟಿದ, ಪ್ರೀತಿಸುತ್ತಿದ್ದ ಹಳ್ಳಿಯನ್ನೇ ತೊರೆದೆವು. ಇಂದು ನನ್ನ ಏಳು ಹೆಣ್ಣುಮಕ್ಕಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೇವರು ನನಗೆ ಮುಂದಿನ ಏಳು ಜನ್ಮಗಳಲ್ಲೂ ಈ ಏಳು ಹೆಣ್ಣುಮಕ್ಕಳನ್ನೇ ನೀಡಲಿ. ನನ್ನ ಮಕ್ಕಳ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ''.- ಕಮಲ್ ಸಿಂಗ್.

ಇದನ್ನೂ ಓದಿ:ವೃತ್ತಾಕಾರದ ರುದ್ರಾಕ್ಷಿ ಹಲಸು;​ ಶಿವಮೊಗ್ಗ ರೈತರಿಗೆ ಸಿಕ್ತು ಪೇಟೆಂಟ್ - Rudrakshi Jackfruit

ABOUT THE AUTHOR

...view details