ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಪ್ರಶ್ನಿಸಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ತಮ್ಮ ವಕೀಲ ಎಂ ಆರ್ ಶಂಶಾದ್ ಅವರ ಮೂಲಕ ಮನವಿ ಸಲ್ಲಿಸಿರುವ ಓವೈಸಿ, ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ ಎಂದು ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು 2019ರ ಡಿಸೆಂಬರ್‌ನಲ್ಲಿಯೇ ಅಂಕಿತ ಹಾಕಿದ್ದರು. ಆದರೆ, ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಧರ್ಮದ ಆಧಾರದ ಮೇಲೆ ಕಾನೂನು ರೂಪಿಸಲು ಸಾಧ್ಯವಿಲ್ಲ. ಈ ಕುರಿತು ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳಿವೆ. ಸಿಎಎ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ತಕ್ಷಣದ ರಿಟ್ ಅರ್ಜಿಯ ಅಂತಿಮ ವಿಲೇವಾರಿಯಾಗುವವರೆಗೆ ದೋಷಪೂರಿತ ಪೌರತ್ವ ತಿದ್ದುಪಡಿ ಕಾಯ್ದೆ, 2019 ಮತ್ತು ತಿದ್ದುಪಡಿ ನಿಯಮಗಳು, 2024ರ ಅನುಷ್ಠಾನವನ್ನು ತಡೆ ಹಿಡಿಯುವ ನಿರ್ದೇಶನಗಳನ್ನು ನೀಡಿ ಎಂದು ಒವೈಸಿ ಮನವಿ ಮಾಡಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯಿದೆ, 2019ರ ಕೆಲವು ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಒಬ್ಬರಾದ ಓವೈಸಿ, ಇದೀಗ ಅಂತಿಮ ವಿಲೇವಾರಿ ತನಕ ಕಾಯಿದೆ ಮತ್ತು 2024ರ ನಿಯಮಗಳ ಅನುಷ್ಠಾನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪೌರತ್ವ ಕಾಯ್ದೆ, 1955ರ ಸೆಕ್ಷನ್ 6 ಬಿ ಅಡಿಯಲ್ಲಿ (ಪೌರತ್ವ (ತಿದ್ದುಪಡಿ) ಕಾಯ್ದೆ, 2019 ರಿಂದ ತಿದ್ದುಪಡಿ ಮಾಡಲ್ಪಟ್ಟಂತೆ) ಅಡಿ ಪೌರತ್ವ ಸ್ಥಾನಮಾನವನ್ನು ನೀಡುವಂತೆ ಕೋರುವ ಯಾವುದೇ ಅರ್ಜಿಗಳನ್ನು ಸರ್ಕಾರವು ಪರಿಗಣಿಸಬಾರದು ಅಥವಾ ಪ್ರಕ್ರಿಯೆಗೊಳಿಸಬಾರದು. ಸಿಎಎಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯೊಂದಿಗೆ ನೋಡಬೇಕು ಎಂದು ಸಹ ಓವೈಸಿ ಹೇಳಿದ್ದಾರೆ.
2019ರ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಲೇವಾರಿಯಾಗುವವರೆಗೆ ಪೌರತ್ವ ತಿದ್ದುಪಡಿ ನಿಯಮಗಳು, 2024ರ ಅನುಷ್ಠಾನವನ್ನು ತಡೆಹಿಡಿಯಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಮಾ. 19 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ತಿಳಿಸಿದೆ.