ಬೆಂಗಳೂರು: ಶಕ್ತಿ ಯೋಜನೆಯ ಹೊರೆಗೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳು ಹಣಕಾಸು ನಿರ್ವಹಣೆಗಾಗಿ ಸಾಲದ ಮೊರೆ ಹೋಗಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಹಣಕಾಸಿನ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳಲು ಸರ್ಕಾರದ ಖಾತ್ರಿ ನೀಡಲು ತೀರ್ಮಾನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಸಾಲ ಎತ್ತುವಳಿ ಮಾಡಲು ಸರ್ಕಾರದ ಗ್ಯಾರಂಟಿ ನೀಡಲು ಅನುಮೋದಿಸಿದೆ. ರಸ್ತೆ ಸಾರಿಗೆ ನಿಗಮಗಳು ಒಟ್ಟು 2,000 ಕೋಟಿ ರೂ. ಸಾಲ ಪಡೆದುಕೊಳ್ಳಲು ಸರ್ಕಾರದ ಒಪ್ಪಿಗೆ ನೀಡಿದೆ.
ಅದರಂತೆ ಕ.ರಾ.ರ.ಸಾ. ನಿಗಮಕ್ಕೆ 623.80 ಕೋಟಿ ರೂ., ಬೆಂ.ಮ.ಸಾ. ಸಂಸ್ಥೆಗೆ 589.20 ಕೋಟಿ ರೂ., ವಾ.ಕ.ರ.ಸಾ. ಸಂಸ್ಥೆಗೆ 646 ಕೋಟಿ ರೂ. ಹಾಗೂ ಕ.ಕ.ರ.ಸಾ. ನಿಗಮಕ್ಕೆ 141 ಕೋಟಿ ರೂ. ಸೇರಿದಂತೆ ಒಟ್ಟು 2,000 ಕೋಟಿ ಸಾಲ ಎತ್ತುವಳಿ ಮೂಲಕ ಇಂಧನ ಬಾಕಿ ಮೊತ್ತ ಮತ್ತು ಭವಿಷ್ಯ ನಿಧಿಗೆ ಅನುದಾನ ಬಳಸಿಕೊಳ್ಳಲು ಸರ್ಕಾರದ ಅನುಮೋದನೆ ನೀಡಿದೆ.
ಈ ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆಯ ಹೊರೆ ನಿಭಾಯಿಸಲು ಇದೀಗ ಸಾರಿಗೆ ನಿಗಮಗಳು ಮತ್ತಷ್ಟು ಸಾಲದ ಕೂಪಕ್ಕೆ ಬೀಳಲಿವೆ. ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗದೀಕರಣ, ಸಿಬ್ಬಂದಿಗಳ ಬಾಕಿ ವೇತನ, ಇಂಧನ ವೆಚ್ಚ, ಸರಬರಾಜು ಬಾಕಿ, ಅಪಘಾತ ಪರಿಹಾರ ಸೇರಿ ಒಟ್ಟು 6,330 ಕೋಟಿ ಸಾಲ ರಸ್ತೆ ಸಾರಿಗೆ ನಿಗಮಗಳ ಮೇಲಿದೆ. ಇದೀಗ ಹೆಚ್ಚುವರಿಯಾಗಿ 2,000 ಕೋಟಿ ಸಾಲ ಪಡೆದರೆ ಒಟ್ಟು ಸಾಲದ ಪ್ರಮಾಣ 8,330.25 ಕೋಟಿ ರೂ.ಗೆ ಏರಿಕೆಯಾಗಲಿದೆ.
ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದ್ದರೂ ಸಹ, ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿದ್ದು, ಆದಾಯ ಕೊರತೆ ಉಂಟಾಗಿದೆ. ನವೆಂಬರ್-2024 ಅಂತ್ಯದಲ್ಲಿ ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ/ರಜೆ ನಗದೀಕರಣ, ಸಿಬ್ಬಂದಿಗಳ ಬಾಕಿ (ತುಟ್ಟಿ ಭತ್ಯೆ, ರಜೆ ನಗದೀಕರಣ), ಇಂಧನ, ಸರಬುರಾಜುದಾರರ ಬಾಕಿ, ಅಪಘಾತ ಪರಿಹಾರ ಪ್ರಕರಣಗಳು, ಇತರೆ ಹಾಗೂ ನಿವೃತ್ತರಿಗೆ ಪರಿಷ್ಕೃತ ಉಪಧನ, ರಜೆ ನಗದೀಕರಣ ಬಾಕಿ ಹಾಗೂ ಸಾಲದ ಹೊಣೆಗಾರಿಕೆಗಳು ಸೇರಿದಂತೆ ಒಟ್ಟು ರೂ.6330.25 ಕೋಟಿಗಳ ಹೊಣೆಗಾರಿಕೆ ಬಾಕಿ ಇದೆ.
ನಿಗಮಗಳಲ್ಲಿ ಬೇರೆ ಯಾವುದೇ ಸಂಪನ್ಮೂಲಗಳು ಲಭ್ಯವಿಲ್ಲದೇ ಇರುವುದರಿಂದ ನವೆಂಬರ್ (2024) ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಪಾವತಿ ಮಾಡಲು ಒಟ್ಟು ರೂ.5527.46 ಕೋಟಿಗಳ ಅವಶ್ಯಕತೆ ಇದೆ. ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ ರೂ.2901.53 ಕೋಟಿ ಹಾಗೂ ಇಂಧನದ ಬಾಕಿ ಮೊತ್ತ ರೂ.827.37 ಕೋಟಿ ಹೀಗೆ ಒಟ್ಟು ರೂ.3,728.90 ಕೋಟಿಗಳ ಸಾಲದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರದ ಖಾತ್ರಿಯೊಂದಿಗೆ ಒಟ್ಟು 2,000 ಕೋಟಿ ರೂ. ಸಾಲವನ್ನು ಪಡೆಯಲು ಸರ್ಕಾರ ಅನುಮೋದಿಸಿದೆ.