ಕರ್ನಾಟಕ

karnataka

ಚುನಾವಣಾ ಬಾಂಡ್​ಗಳ ಮಾಹಿತಿ ಸೂಕ್ತ ಸಮಯದಲ್ಲಿ ಬಹಿರಂಗ: ರಾಜೀವ್​​ ಕುಮಾರ್​

By ETV Bharat Karnataka Team

Published : Mar 14, 2024, 9:37 AM IST

ಚುನಾವಣಾ ಬಾಂಡ್​ಗಳ ಕುರಿತು ಎಸ್​ಬಿಐ ನೀಡಿದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜೀವ್​​ ಕುಮಾರ್​
ರಾಜೀವ್​​ ಕುಮಾರ್​

ಜಮ್ಮು:ಚುನಾವಣಾ ಆಯೋಗವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಸ್ವೀಕರಿಸಿದೆ. ಅದಕ್ಕೆ ಸಂಬಂಧಿತ ಎಲ್ಲಾ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ.

ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಬಂದ ಚುನಾವಣಾ ಬಾಂಡ್​ಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಸುಪ್ರೀಂಕೋರ್ಟ್​ ಸೂಚಿಸಿತ್ತು. ಅದರಂತೆ ಎಸ್​ಬಿಐ ಮಾರ್ಚ್​ 12 ರಂದು ಪೂರ್ಣ ಮಾಹಿತಿ ನೀಡಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಜೀವ್​ ಕುಮಾರ್​ ಅವರು, 2019 ರಿಂದ ಈವರೆಗೂ ಖರೀದಿಯಾಗಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್​ ನೀಡಿದ ಗಡುವಿನೊಳಗೆ ವಿವರಗಳನ್ನು ನೀಡಿದ್ದಾರೆ. ಅವುಗಳನ್ನು ಪರಿಶೀಲಿಸಿದ ಬಳಿಕ ಎಲ್ಲ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದರು.

ಜಮ್ಮು ಕಾಶ್ಮೀರದಲ್ಲಿ ಚುನಾವಣೆ:370ನೇ ವಿಧಿ ರದ್ದಾದ ಬಳಿಕ ಸಾರ್ವತ್ರಿಕ ಚುನಾವಣೆಯನ್ನೇ ಕಾಣದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ರಾಜೀವ್​ ಕುಮಾರ್ ಬುಧವಾರ ಇಲ್ಲಿಗೆ ಆಗಮಿಸಿದ್ದರು.

2024 ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ದೇಶಾದ್ಯಂತ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ವಿನಂತಿಸುತ್ತೇವೆ. ಸುಳ್ಳು ಸುದ್ದಿಗಳಿಗೆ ಪ್ರತಿಕ್ರಿಯಿಸಲು ಎಲ್ಲಾ ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ಸೆಲ್ ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಎಲ್ಲಾ ಅಭ್ಯರ್ಥಿಗಳಿಗೆ ಭದ್ರತೆಯನ್ನು ಒದಗಿಸಲಾಗುವುದು. ಕೇಂದ್ರ ಪಡೆಗಳನ್ನು ನಿಯೋಜಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಲೆಟ್‌ಗಳ ಮೂಲಕ ಆನ್‌ಲೈನ್ ನಗದು ವರ್ಗಾವಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು ಎಂದು ಕುಮಾರ್ ಹೇಳಿದರು. 85 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಚುನಾವಣಾ ಬಾಂಡ್​ಗಳ ಕುರಿತ ಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಈವರೆಗೂ 22,217 ಬಾಂಡ್​ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು 22,030 ಬಾಂಡ್​ಗಳನ್ನು ಎನ್​ಕ್ಯಾಶ್​ ಮಾಡಿಕೊಂಡಿವೆ ಎಂದು ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಸುಪ್ರೀಂಕೋರ್ಟ್​ಗೆ ಬುಧವಾರ ಅಫಿಡವಿಟ್​ ಸಲ್ಲಿಸಿದೆ.

ಇದನ್ನೂ ಓದಿ:22,217 ಚುನಾವಣಾ ಬಾಂಡ್​ ಖರೀದಿ, ಈ ಪೈಕಿ 22,030 ಎನ್​ಕ್ಯಾಶ್​: ಸುಪ್ರೀಂಗೆ ಮಾಹಿತಿ ನೀಡಿದ ಎಸ್​ಬಿಐ

ABOUT THE AUTHOR

...view details