ಹೈದರಾಬಾದ್ (ತೆಲಂಗಾಣ): ಕೌಟುಂಬಿಕ ಕಲಹ ಮಾಡಿದ ಸಾಲದಿಂದ ಬೇಸತ್ತು ಮಕ್ಕಳು ಸೇರಿ ಒಟ್ಟು 8 ಜನ ಕೊನೆಯುಸಿರೆಳೆದ ಪ್ರತ್ಯೇಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆನ್‌ಲೈನ್ ಗೇಮ್ ಚಟಕ್ಕೆ ಸಿಲುಕಿದ್ದ ಗಾಜುಲರಾಮರಂನಲ್ಲಿ ವಾಸವಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಾಲ ತೀರಿಸಲು ದಾರಿ ಕಾಣದೆ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಸಂಗಾರೆಡ್ಡಿ ಮೂಲದ ತಾಯಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ಮೂವರು ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಕುರಿತು ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
ಟೆಕ್ಕಿ ಕುಟುಂಬ: ಮೂಲತಃ ರೆಡ್ಡಿ ಕಾಲೋನಿಯ ಸಾಫ್ಟ್‌ವೇರ್ ಇಂಜಿನಿಯರ್ ವೆಂಕಟೇಶ್ (40) ತಮ್ಮ ಪತ್ನಿ ವರ್ಷಿಣಿ ಮತ್ತು 11 ಮತ್ತು 2 ವರ್ಷದ ಇಬ್ಬರು ಮಕ್ಕಳೊಂದಿಗೆ ಕುತ್ಬುಳ್ಳಾಪುರದ ಗಾಜುಲರಾಮರಂನಲ್ಲಿ ವಾಸಿಸುತ್ತಿದ್ದರು. ಆನ್‌ಲೈನ್ ಗೇಮ್ ವ್ಯಸನಿಯಾಗಿದ್ದ ವೆಂಕಟೇಶ್, ಸ್ನೇಹಿತರು, ಕುಟುಂಬಸ್ಥರು, ಪರಿಚಯಸ್ಥರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆರಂಭದಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಹಾಗೂ ಖುಷಿಗಾಗಿ ಆಟ ಆಡಲು ಪ್ರಾರಂಭಿಸಿದ್ದ ವೆಂಕಟೇಶ್, ನಿಧಾನವಾಗಿ ಅದಕ್ಕೆ ದಾಸನಾಗಿದ್ದರು. ಕೈಯಲ್ಲಿ ಫೋನ್ ನೋಡಿದಾಗಲೆಲ್ಲ ಆಟವೇ ಅವನ ಪ್ರಪಂಚವಾಗಿತ್ತು. ಆಡುತ್ತಲೇ ದೊಡ್ಡ ಮೊತ್ತ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಸಾಲದೆಂಬಂತೆ ಆಟವಾಡಲು ಹಣಕ್ಕಾಗಿ ಸಾಲದ ಆ್ಯಪ್‌ಗಳು, ಸ್ನೇಹಿತರು ಮತ್ತು ಪರಿಚಯಸ್ಥರಿಂದ ನಾನಾ ನೆಪ ಹೇಳಿ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದರು.
ಮೈಮೇಲೆ ಸಾಲದ ಭಾರ ಹೆಚ್ಚಾಗುತ್ತಿದ್ದಂತೆ ವೆಂಕಟೇಶ್, ಪತ್ನಿಗೆ ವಿಷಯ ತಿಳಿಸಿದ್ದ. ಆದರೆ, ಅಷ್ಟು ಹಣ ಎಲ್ಲಿಂದ ತರುವುದು, ಚಿನ್ನಾಭರಣ ಮಾರಿದರೂ ಮಾಡಿದ ಸಾಲ ತೀರಿಸಲಾಗುವುದಿಲ್ಲ ಎಂದು ಪತ್ನಿ ವರ್ಷಿಣಿ ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದರು. ಬೇರೆ ದಾರಿ ಕಾಣದ ವೆಂಕಟೇಶ್, ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದ. ಆದರೆ, ತಾನೊಬ್ಬನೇ ಆತ್ಮಹತ್ಯೆ ಮಾಡಿಕೊಂಡರೆ ಸಾಲಗಾರರು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಾರೆಂದು ತಿಳಿದು ಶನಿವಾರ (ಆ.31) ರಾತ್ರಿ 10 ಗಂಟೆಯ ನಂತರ ಮಲಗಿದ್ದ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಪತ್ನಿಯನ್ನೂ ಉಸಿರುಗಟ್ಟಿಸಿ ಕೊಂದಿದ್ದಾನೆ. ಎಲ್ಲರೂ ಸತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸಿ ತಂದೆಗೆ ಸೆಲ್ಫಿ ವಿಡಿಯೋ ಮಾಡಿದ ವೆಂಕಟೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.