ನವದೆಹಲಿ: ಈದ್ ಉಲ್ ಫಿತರ್ ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಈದ್ ಅಥವಾ ರಂಜಾನ್ ಈದ್ ಎಂದು ಕರೆಯಲಾಗುತ್ತದೆ. ದಾನ ,ಧರ್ಮ, ಮಾನವೀಯತೆ ಪ್ರೀತಿಯ ಸಂದೇಶವನ್ನು ಸಾರುವ ಹಬ್ಬ ಎಂದರೆ ಅದು ಈದ್-ಉಲ್-ಫಿತರ್ ಆಗಿದೆ. ರಂಜಾನ್ ಸಮಯದಲ್ಲಿ ಮುಸ್ಲಿಂ ಬಾಂಧವರು ಹಗಲು ಒಂದು ತೊಟ್ಟು ನೀರು ಕುಡಿಯದೇ ಉಪವಾಸವಿದ್ದು ಕಠಿಣ ವ್ರತ ಪಾಲಿಸುತ್ತಾರೆ. ಜತೆಗೆ ಅವರ ಪವಿತ್ರ ಗ್ರಂಥ ಕುರಾನ್ ಪಠಿಸುತ್ತಾರೆ. ಈ ಮೂಲಕ ಅಲ್ಲಾಹ್ನ ಕೃಪೆಗೆ ಪಾತ್ರರಾಗುತ್ತಾರೆ.
ಇತರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಅಮೆರಿಕ, ಬ್ರಿಟನ್, ಕೆನಡಾದ ಮುಸ್ಲಿಂ ಸಮುದಾಯದವರು 2024 ರ ಮಾರ್ಚ್ 11 ರಿಂದ ಉಪವಾಸ ಆರಂಭಿಸಿದ್ದರು. ಅವರ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ವರ್ಷದ ಒಂಬತ್ತನೇ ತಿಂಗಳಾಗಿದೆ. ಈ ತಿಂಗಳಲ್ಲಿ 29 ಅಥವಾ 30 ದಿನಗಳಿರುತ್ತದೆ. ಆದರೆ ಈ ವರ್ಷ ರಂಜಾನ್‌ನ 29 ದಿನಗಳು ಪೂರ್ಣಗೊಂಡರೂ, ಕೆಲವು ದೇಶಗಳಲ್ಲಿ ಏಪ್ರಿಲ್ 9 ರಂದು ಈದ್ ಚಂದ್ರ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ಬಾರಿ ರಂಜಾನ್ ತಿಂಗಳು ಪೂರ್ಣ 30 ದಿನಗಳನ್ನು ಹೊಂದಿದಂತಾಗಿದೆ.
ಇನ್ನು ಭಾರತದಲ್ಲಿ 2024 ಮಾರ್ಚ್ 12ರಿಂದ ಉಪವಾಸ ಪ್ರಾರಂಭಿಸಲಾಗಿದೆ. ಆದ್ದರಿಂದ ಈದ್-ಉಲ್-ಫಿತರ್‌ನ ಚಂದ್ರನನ್ನು ಏಪ್ರಿಲ್ 10 ರಂದು ಭಾರತದಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈದ್ - ಉಲ್ - ಫಿತರ್ ಹಬ್ಬವನ್ನು ಏಪ್ರಿಲ್ 11(ನಾಳೆ) ರಂದು ಆಚರಿಸಲಾಗುತ್ತದೆ. ಸೌದಿ ಅರೇಬಿಯಾ, ಅಮೆರಿಕ, ಬ್ರಿಟನ್, ಕೆನಡಾ ಮೊದಲಾದ ದೇಶಗಳಲ್ಲಿ ನಿನ್ನೆ ಚಂದ್ರನ ದರ್ಶನವಾಗಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಘೋಷಿಸಿದ್ದಾರೆ.
ನಿನ್ನೆ ಭಾರತದ ಎಲ್ಲ ರಾಜ್ಯಗಳಲ್ಲಿಯೂ ವಿಚಾರಿಸಿದಾಗ ಈದ್ ಚಂದ್ರ ಎಲ್ಲಿಯೂ ಕಾಣಿಸಿಲ್ಲ ಎಂಬ ಮಾಹಿತಿ ಬಂದಿದ್ದು, ಇಂದು ಚಂದ್ರ ಕಾಣಲಿದ್ದಾನೆ. ಹಾಗಾಗಿ ನಾಳೆ ದೇಶದಾದ್ಯಂತ ಈದ್ ಸಂಭ್ರಮ ಕಳೆಗಟ್ಟಲಿದೆ. ರಂಜಾನ್ ಹಿನ್ನೆಲೆ ಜಾಮಾ ಮಸೀದಿ ಬಳಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ನೂಕುನುಗ್ಗಲು ಸಹ ಉಂಟಾಗಿದೆ . ಇನ್ನು ಈದ್ - ಉಲ್ - ಫಿತರ್ ದಿನದಂದು ಜಾಮಾ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಮುನ್ನೆಚ್ಚರಿಕೆಯಾಗಿ ದೆಹಲಿ ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ:ರಂಜಾನ್ ಮಾಸ: ಕುಂದಾನಗರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಸಂಭ್ರಮ - RAMADAN SHOPPING