ಬೆಂಗಳೂರು: ಉದ್ಯೋಗದ ಸ್ಥಳದಲ್ಲಿ ಪ್ರಾಧ್ಯಾಪಕರೊಬ್ಬರಿಗೆ ಜಾತಿ ಆಧರಿಸಿ ತಾರತಮ್ಯ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಭಾರತೀಯ ವ್ಯವಸ್ಥಾಬಂಧ ಸಂಸ್ಥೆ (ಐಐಎಂ-ಬಿ) ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಹಾಗೂ ಇತರೆ ಏಳು ಮಂದಿಯ ವಿರುದ್ಧ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಐಐಎಂಬಿ ಮಾರ್ಕೆಟಿಂಗ್ ವಿಭಾಗದ ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರು ಆಧರಿಸಿ ಮೈಕೋ ಲೇಔಟ್ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಐಎಂಬಿ ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್, ಡೀನ್ ದಿನೇಶ್ ಕುಮಾರ್ ಸೇರಿದಂತೆ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಅರ್ಜಿ ಸಂಬಂಧ ಮೈಕೋ ಲೇಔಟ್ ಠಾಣಾ ಪೊಲೀಸರು ಮತ್ತು ದೂರುದಾರ ಗೋಪಾಲ್ ದಾಸ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಪರಿಶಿಷ್ಟ ಜಾತಿಗೆ ಸೇರಿದ ಐಐಎಂ-ಬಿ ಮಾರ್ಕೆಂಟಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಗೋಪಾಲ್ ದಾಸ್ 2024ರ ಡಿ.20ರಂದು ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಐಐಎಂಬಿ ನಿರ್ದೇಶಕ ರಿಷಿಕೇಶ್ ಕೃಷ್ಣನ್, ಡೀನ್ ದಿನೇಶ್ ಕುಮಾರ್ ಸೇರಿ ಐಐಎಂಬಿಯ ಒಟ್ಟು 8 ಮಂದಿ ಉದ್ದೇಶಪೂರ್ವಕವಾಗಿ ನನ್ನ ಜಾತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಕೆಲಸದ ವಾತಾವರಣದಲ್ಲಿ ಸಮಾನ ಅವಕಾಶವನ್ನು ನೀಡದೆ ಜಾತಿ ಭೇದ-ವೈಷಮ್ಯ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಅಡಚಣೆ ಉಂಟು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆ ದೂರು ಆಧರಿಸಿದ ಪೊಲೀಸರು, ಅರ್ಜಿದಾರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ನಿಯಂತ್ರಣ) ಕಾಯ್ದೆಯಡಿ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು.
ಡಿಸಿಆರ್ಯ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿದ್ದ ಹೈಕೋರ್ಟ್: ಇದೇ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ವಿಚಾರಣಾ ಪ್ರಕ್ರಿಯೆಗೂ ತಡೆಯಾಜ್ಞೆ ನೀಡಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ. ಡಿಸಿಆರ್‌ಇ ವಿಚಾರಣೆ ರದ್ದುಪಡಿಸಿ ರಿಷಿಕೇಶ್ ಕೃಷ್ಣನ್ ಹಾಗೂ ಐಐಎಂಬಿಯ ಐವರು ಪ್ರಾಧ್ಯಾಪಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಅಧಿಕಾರವಿಲ್ಲ. ಹೀಗಾಗಿ, ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಡಿಸಿಆರ್‌ಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ; ತೆಲುಗು ನಟಿ ಹೇಮಾ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ