ಚಾಮರಾಜನಗರ: ನೂತನ ವರ್ಷಾಚರಣೆ ಸಂಭ್ರಮ ಮುಗಿಸಿ ಹಿಂತಿರುಗುವಾಗ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದ ಸಮೀಪ ನಡೆದಿದೆ.
ಬೊಮ್ಮಲಾಪುರ ಸೆಸ್ಕ್ ಕಚೇರಿಯಲ್ಲಿ ಅಸಿಸ್ಟೆಂಟ್ ಪವರ್ ಮ್ಯಾನ್ ಆಗಿದ್ದ ಪ್ರತಾಪ್(28) ಹಾಗೂ ಕೊಂಗಳ್ಳಯ್ಯ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಂಡ್ಯ ಜಿಲ್ಲೆಯ ಅಭಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
![Returning From New Year Party, Two Youths Killed In Car Accident In Chamarajanagar](https://etvbharatimages.akamaized.net/etvbharat/prod-images/01-01-2025/kn-cnr-newyear-av-ka10038_01012025083252_0101f_1735700572_737.jpg)
ಇಂದು ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಕೊಡಸೋಗೆ ಸಮೀಪದ ರಸ್ತೆ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ.
![Returning From New Year Party, Two Youths Killed In Car Accident In Chamarajanagar](https://etvbharatimages.akamaized.net/etvbharat/prod-images/01-01-2025/kn-cnr-newyear-av-ka10038_01012025083252_0101f_1735700572_533.jpg)
ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಕಾರಿನ ಮೇಲೆ ಮುರಿದು ಬಿದ್ದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ತೆರಕಣಾಂಬಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
![CAR ACCIDENT](https://etvbharatimages.akamaized.net/etvbharat/prod-images/01-01-2025/23232175_bng.jpg)
ಬೆಂಗಳೂರಿನಲ್ಲೂ ಕಾರು ಅಪಘಾತ: ಬೆಂಗಳೂರಿನಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ತೆರಳುತ್ತಿದ್ದವರ ಕಾರು ಅಪಘಾತಕ್ಕೀಡಾದ ಘಟನೆ ಇಂದು ಮುಂಜಾನೆ ಬೆಳ್ಳಂದೂರು ಬಳಿ ನಡೆದಿದೆ. ತಡರಾತ್ರಿ ಕೋರಮಂಗಲದಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿದ್ದ ಮೂವರು ಯುವಕರು ಹಾಗೂ ಓರ್ವ ಯುವತಿಯಿದ್ದ ಗುಂಪು ಕಾರಿನಲ್ಲಿ ಯಮಲೂರು ಕಡೆ ತೆರಳುತ್ತಿತ್ತು. ಈ ವೇಳೆ ಬೆಳ್ಳಂದೂರು ಕೆರೆ ಬಳಿಯಿರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮಾರ್ಷಲ್‌ಗಳು, ಕಾರಿನಲ್ಲಿದ್ದವರಿಗೆ ಸಹಾಯ ಮಾಡಿ ಅಲ್ಲಿಂದ ಕಳಿಸಿಕೊಟ್ಟಿದ್ದಾರೆ. ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಗರ ಬಳಿ ಕಾರು-ಬಸ್ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು - BUS CAR ACCIDENT