ಲಖನೌ (ಉತ್ತರಪ್ರದೇಶ): ತೆರಿಗೆ ವಂಚನೆ ಪ್ರಕರಣದಲ್ಲಿ ಇಡಿ ಸಹರಾನ್‌ಪುರ ಮೂಲದ ಮದ್ಯದ ಕಂಪನಿಯ 7 ಕೋಟಿ 31 ಲಕ್ಷ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ಆಸ್ತಿಯು ತಾಪ್ರಿಯ ಯೂಸುಫ್‌ಪುರದಲ್ಲಿರುವ ಸಹಕಾರಿ ಕಂಪನಿ ಲಿಮಿಟೆಡ್‌ಗೆ (CCL) ಸೇರಿದೆ. ಮ್ಯಾನೇಜರ್ ಮತ್ತು ಉದ್ಯೋಗಿಗಳು ಒಂದೇ ಗೇಟ್ ಪಾಸ್ ಮತ್ತು ಇನ್‌ವಾಯ್ಸ್‌ನಲ್ಲಿ ಎರಡು ವಾಹನಗಳ ಮದ್ಯವನ್ನು ತೆಗೆದುಕೊಳ್ಳುತ್ತಿದ್ದರು. ಇದರಿಂದ ಕೋಟಿಗಟ್ಟಲೆ ತೆರಿಗೆ ವಂಚನೆಯಾಗುತ್ತಿದೆ. ಇದಕ್ಕೂ ಮುನ್ನ ಈ ಕಾರ್ಖಾನೆಯ 27 ಕೋಟಿ 42 ಲಕ್ಷ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿತ್ತು.
ಎಸ್‌ಟಿಎಫ್ 2021ರಲ್ಲಿ ಕಂಟ್ರಿ ಲಿಕ್ಕರ್ ಫ್ಯಾಕ್ಟರಿ ಕೋಆಪರೇಟಿವ್ ಕಂಪನಿ ಲಿಮಿಟೆಡ್‌ನಲ್ಲಿ (ಸಿಸಿಎಲ್) ಕೋಟಿ ಮೌಲ್ಯದ ತೆರಿಗೆ ವಂಚನೆಯ ದೂರನ್ನು ಸ್ವೀಕರಿಸಿತ್ತು. ಕಾರ್ಖಾನೆಯ ಮೇಲೆ ಎಸ್‌ಟಿಎಫ್ ದಾಳಿ ನಡೆಸಿದಾಗ, ನಿರ್ವಾಹಕರು ಮತ್ತು ಹೆಚ್ಚಿನ ಉದ್ಯೋಗಿಗಳು ಪರಾರಿಯಾಗಿದ್ದರು. ಇದರ ನಂತರ, ಸಹರಾನ್‌ಪುರದ ಈ ಕಾರ್ಖಾನೆಯ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಜತೆ ಶಾಮೀಲಾಗಿ ಕಾರ್ಖಾನೆ ನಿರ್ವಾಹಕರು ಈ ತೆರಿಗೆ ವಂಚಿಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅನೇಕ ಸಾರಿಗೆದಾರರು ಸಹ ಅವರಿಗೆ ಬೆಂಬಲ ನೀಡುತ್ತಿದ್ದರು ಎಂಬ ಅಂಶವು ಹೊರಬಿದ್ದಿತ್ತು.